ಬೆಂಗಳೂರು: ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿ ಪಟ್ಟ ಗಿಟ್ಟಿಸಿಕೊಳ್ಳಲು ತಂತ್ರಗಾರಿಕೆ ರೂಪಿಸಿದ್ದಾರೆ.
ಒಬ್ಬೊಬ್ಬರೇ ಶಾಸಕರನ್ನು ಕರೆದು ಸಮಾಲೋಚನೆ ನಡೆಸಿದ್ದಾರೆ. ಸರ್ಕಾರಿ ನಿವಾಸದಿಂದ ಕನ್ನಿಂಗ್ ಹ್ಯಾಮ್ ರಸ್ತೆಯ ಖಾಸಗಿ ಕಟ್ಟಡದಲ್ಲಿ ಶಾಸಕರೊಂದಿಗೆ ಚರ್ಚೆ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸ ರಾಜಕೀಯ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿದ್ದು, ಬೆಳಗ್ಗೆ ಅವರ ನಿವಾಸಕ್ಕೆ ಶಾಸಕರಾದ ಕೃಷ್ಣಭೈರೇಗೌಡ, ಕೆ.ಹೆಚ್. ಮುನಿಯಪ್ಪ ಸೇರಿದಂತೆ ಹಲವು ನಾಯಕರು ಭೇಟಿ ನೀಡಿದ್ದಾರೆ. ವಿವಿಧ ಭಾಗಗಳಿಂದ ಆಗಮಿಸುತ್ತಿರುವ ನೂತನ ಶಾಸಕರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಶಾಸಕರ ಭೇಟಿ ಭಾರಿ ಕುತೂಹಲ ಮೂಡಿಸಿದೆ.
ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ತೀವ್ರ ಪೈಪೋಟಿ ಇದ್ದು, ಇಂದು ಸಂಜೆ ಶಾಸಕಾಂಗ ಸಭೆ ನಡೆಯಲಿದೆ. ಸಭೆಯಲ್ಲಿ ಶಾಸಕಾಂಗ ನಾಯಕರ ಆಯ್ಕೆಗೆ ಅಭಿಪ್ರಾಯ ಪಡೆಯುವ ವೇಳೆ ಸಿದ್ದರಾಮಯ್ಯ ಬೆಂಬಲಿಸುವಂತೆ ಹೇಳಲಾಗಿದೆ. ಸಭೆಯಲ್ಲಿ ವ್ಯಕ್ತವಾಗುವ ಅಭಿಪ್ರಾಯವನ್ನು ಹೈಕಮಾಂಡ್ ಗೆ ತಿಳಿಸಲಿದ್ದು, ನಂತರ ಸಿಎಂ ಯಾರಾಗಲಿದ್ದಾರೆ ಎಂಬುದರ ಬಗ್ಗೆ ತೀರ್ಮಾನಿಸಲಾಗುವುದು ಎನ್ನಲಾಗಿದೆ. ಡಿ.ಕೆ. ಶಿವಕುಮಾರ್ ಕೂಡ ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿದ್ದು, ಈ ನಿಟ್ಟಿನಲ್ಲಿ ಪಕ್ಷದ ನಾಯಕರೊಂದಿಗೆ ಚರ್ಚೆ ನಡೆಸಿದ್ದಾರೆ. ಸಂಜೆ ನಡೆಯುವ ಶಾಸಕಾಂಗ ಸಭೆ ಕುತೂಹಲ ಮೂಡಿಸಿದೆ.