ವಿಜಯಪುರ: ಎಂಪಿ ಚುನಾವಣೆ ಸೋಲಿನ ಸೇಡಿಗೆ ತೈಲ ದರ ಏರಿಕೆ ಎಂಬ ವಿಪಕ್ಷ ನಾಯಕ ಆರ್.ಅಶೋಕ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಚುನಾವಣೆಗೂ ತೈಲ ಬೆಲೆ ಏರಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿ ಇದ್ದಾಗ ಶೇ.35ರಷ್ಟಿತ್ತು. ಈಗ ರಾಜ್ಯದಲ್ಲಿ ತೈಲ ದರ 102.86 ಪೈಸೆ ಆಗಿದೆ. ತಮಿಳುನಾಡು ಸಮ ಆಗಿದೆ. ಆಂಧ್ರಪ್ರದೇಶದಲ್ಲಿ 109 ರೂ ಇದೆ. ಹೈದರಾಬಾದ್ ನಲ್ಲಿಯೂ ಹೆಚ್ಚಳವಾಗಿದೆ. ಮಹಾರಾಷ್ಟ್ರದಲ್ಲಿ 104 ರೂ, ರಾಜಸ್ಥಾನದಲಿ 104.86ರೂ ಇದೆ ಎಂದರು.
ರಾಜ್ಯ ಸರ್ಕಾರವು ಪೆಟ್ರೋಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು 29.84% ಗೆ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು 18.44% ಗೆ ಹೆಚ್ಚಳ ಮಾಡಿದೆ. ಈ ಏರಿಕೆಯ ನಂತರವೂ ಕರ್ನಾಟಕವು ತೈಲೋತ್ಪಾನ್ನಗಳ ಮೇಲೆ ವಿಧಿಸುತ್ತಿರುವ ತೆರಿಗೆಯು ದಕ್ಷಿಣ ಭಾರತದ ರಾಜ್ಯಗಳಿಗಿಂತ ಹಾಗೂ ನಮ್ಮ ರಾಜ್ಯದ ಆರ್ಥಿಕತೆಯ ಗಾತ್ರಕ್ಕೆ ಹೋಲುವ ಮಹಾರಾಷ್ಟ್ರ ರಾಜ್ಯಕ್ಕಿಂತಲೂ ಕಡಿಮೆಯಿದೆ.
ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಮೇಲೆ ಮೌಲ್ಯವರ್ಧಿತ ತೆರಿಗೆ ( ವ್ಯಾಟ್ ) 25% ಜೊತೆಗೆ ಹೆಚ್ಚುವರಿ ತೆರಿಗೆ ರೂ. 5.12 ಇದೆ. ಹಾಗೂ ಡೀಸೆಲ್ ಮೇಲೆ 21% ಇದೆ. ಇದಕ್ಕೆ ಹೋಲಿಸಿದರೆ ರಾಜ್ಯದ ಪರಿಷ್ಕೃತ ದರ ಕೂಡ ಜನರಿಗೆ ಹೊರೆಯಾಗದಂತಿದೆ. ಮೌಲ್ಯವರ್ಧಿತ ತೆರಿಗೆ ಹೆಚ್ಚಳದ ಹೊರತಾಗಿಯೂ, ರಾಜ್ಯದಲ್ಲಿ ಡೀಸೆಲ್ ಬೆಲೆ ಗುಜರಾತ್ ಹಾಗೂ ಮಧ್ಯಪ್ರದೇಶಗಳಿಗಿಂತ ಕಡಿಮೆಯಿದೆ. ಪೆಟ್ರೋಲಿಯಂ ಉತ್ಪನ್ನಗಳ ದರವು ಜನರಿಗೆ ಹೊರೆಯಾಗದ ರೀತಿಯಲ್ಲಿ ಲಭ್ಯವಾಗಿಸಲು ನಾವು ಬದ್ಧರಿದ್ದೇವೆ ಎಂದು ಹೇಳಿದರು.