ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವು ಪ್ರಮುಖ ಘಟ್ಟವನ್ನ ತಲುಪಿರೋದ್ರ ಬೆನ್ನಲ್ಲೇ ಮಂಗಳೂರಿನಲ್ಲಿ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಮಹತ್ವದ ಹೇಳಿಕೆ ನೀಡಿದ್ದಾರೆ.
ಜನಗಳ ಹಿತ ಕಾಪಾಡಬೇಕು ಎಂಬ ಯೋಚನೆ ಕಳೆದ 2 ವರ್ಷಗಳಿಂದಲೂ ಈ ಸರ್ಕಾರಕ್ಕೆ ಬಂದಿಲ್ಲ. ಈ ಹಿಂದೆ ಬಂದ ಪ್ರವಾಹಕ್ಕೆ ಸಿಎಂ ಯಡಿಯೂರಪ್ಪ ಇನ್ನೂ ಪರಿಹಾರವನ್ನ ನೀಡಿಲ್ಲ. ಇದೀಗ ಮತ್ತೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಗಳೂ ಕೊಚ್ಚಿ ಹೋಗುತ್ತಿದೆ. ಜನರು ಸಾಯುತ್ತಿದ್ದಾರೆ. ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕಿದ್ದ ಈ ಸಂದರ್ಭದಲ್ಲಿ ಸಿಎಂ ಬದಲಾವಣೆಗೆ ಕಸರತ್ತು ನಡೆಯುತ್ತಿದೆ.ಮುಂದೆ ಯಾರು ಸಿಎಂ ಆಗ್ತಾರೆ ಅನ್ನೋದು ನನಗೂ ಗೊತ್ತಿಲ್ಲ. ಆದರೆ ಯಾರೇ ಸಿಎಂ ಆದರೂ ಸಹ ಬಿಜೆಪಿ ಒಂದು ಭ್ರಷ್ಟಾಚಾರದ ಪಕ್ಷವಾಗಿಯೇ ಇರಲಿದೆ. ಹೀಗಾಗಿ ಈ ಪಕ್ಷವು ರಾಜ್ಯದಿಂದ ಎಷ್ಟು ಬೇಗ ತೊಲಗುತ್ತೋ ಅಷ್ಟು ಬೇಗ ರಾಜ್ಯಕ್ಕೆ ಒಳ್ಳೆಯದಾಗುತ್ತೆ ಎಂದು ಗುಡುಗಿದ್ರು.
ಇನ್ನು ಯಡಿಯೂರಪ್ಪರನ್ನ ಸಿಎಂ ಸ್ಥಾನದಿಂದ ಇಳಿಸದಂತೆ ಮಠಾಧೀಶರ ಒತ್ತಾಯದ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಸಿದ್ದರಾಮಯ್ಯ, ಯಾವುದೇ ಮಠಾಧೀಶರಾಗಿರಲಿ ರಾಜಕಾರಣದಲ್ಲಿ ಕೈ ಹಾಕಬಾರದು. ಅಭಿಪ್ರಾಯ ಹೇಳೋದು ಬೇರೆ. ಹಾಗಂತ ಪಕ್ಷದ ಆಂತರಿಕ ವಿಚಾರದಲ್ಲಿ ಮೂಗು ತೂರಿಸೋದು ಸರಿಯಲ್ಲ ಎಂದು ಹೇಳಿದ್ರು.
ದಲಿತ ಸಿಎಂ ಆಯ್ಕೆ ಮಾಡಿ ಎಂಬ ಕಟೀಲ್ ಹೇಳಿಕೆ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಸಿದ್ದರಾಮಯ್ಯ, ನಳೀನ್ ಕುಮಾರ್ ಕಟೀಲ್ ಈ ಹಿಂದೆ ನನಗೆ ದಲಿತ ಮುಖ್ಯಮಂತ್ರಿಯನ್ನ ಘೋಷಣೆ ಮಾಡಿ ಎಂದು ಸವಾಲೆಸೆದಿದ್ದರು. ಇದೀಗ ಬಿಜೆಪಿಯವರಿಗೆ ಈ ಅವಕಾಶ ಬಂದಿದೆ. ಕಟೀಲ್ ಈಗ ರಾಜ್ಯದಲ್ಲಿ ದಲಿತ ಸಿಎಂರನ್ನ ಆಯ್ಕೆ ಮಾಡಲಿ ಎಂದು ಬಹಿರಂಗ ಸವಾಲ್ ಎಸೆದಿದ್ದಾರೆ.
ವಲಸಿಗರು ಪಕ್ಷಕ್ಕೆ ಮರಳುವ ವಿಷಯವಾಗಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಯಾವುದೇ ಕಾರಣಕ್ಕೂ ವಲಸಿಗರನ್ನ ಪಕ್ಷಕ್ಕೆ ವಾಪಸ್ ಕರೆಸಿಕೊಳ್ಳುವ ಮಾತೇ ಇಲ್ಲ. ಈ ಹಿಂದೆ ಸದನದಲ್ಲೇ ಈ ವಿಚಾರವಾಗಿ ಹೇಳಿದ್ದೆ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ ಎಂದು ಹೇಳಿದ್ರು.