ಬೆಂಗಳೂರು: ಬರ ಅಧ್ಯಯನದ ಬಗ್ಗೆ ರಾಜ್ಯ ಸರ್ಕಾರ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ, ಬರ ಅಧ್ಯಯನ ನಡೆಸಿದ್ದು ಕೇಂದ್ರ ಸರ್ಕಾರದ ತಂಡ. ವೈಜ್ಞಾನಿಕವಾಗಿ ಮಾಡಿಲ್ಲ ಎಂದು ಕೇಂದ್ರ ಸರ್ಕಾರವನ್ನೇ ಬೈಯ್ಯಲಿ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಈಗಾಗಲೇ ರಾಜ್ಯಕ್ಕೆ ಬಂದು ಬರ ಅಧ್ಯಯನ ಮಾಡಿದೆ. ನಾವೂ ಕೂಡ ಮಾಡಿದೆವು. ಈಗ ಬಿಜೆಪಿಯವರೇನು ಬರ ಅಧ್ಯಯನ ಮಾಡುತ್ತಾರೆ? ರಾಜಕೀಯಕ್ಕಾಗಿ ಬಿಜೆಪಿಯವರು ಬರ ಅಧ್ಯಯನಕ್ಕೆ ಹೋಗುತ್ತಿದ್ದಾರೆ ಎಂದು ಟಾಂಗ್ ನೀಡಿದರು.
ಕೇಂದ್ರ ತಂಡ ಬರ ಅಧ್ಯಯನ ಮಾಡಿ ಹೋಗಿದೆ. ಆದರೆ ವರದಿ ನೀಡಿಲ್ಲ. ಮೊದಲು ಬಿಜೆಪಿಯವರು ಕೇಂದ್ರ ಸರ್ಕಾರದ ಜೊತೆ ಚರ್ಚಿಸಿ ಅನುದಾನ ಕೊಡಿಸಲಿ. ನಾವು ಕೇಂದ್ರ ಸರ್ಕಾರದ ಬಳಿ 17,900 ಕೋಟಿ ಪರಿಹಾರ ಕೇಳಿದ್ದೇವೆ. 33,700 ಕೋಟಿ ನಷ್ಟವಾಗಿದೆ ಅದನ್ನು ಮೊದಲು ಕೊಡಿಸಲಿ. 25 ಜನ ಬಿಜೆಪಿ ಸಂಸದರಿದ್ದಾರಲ್ಲ ಕೇಂದ್ರದ ಬಳಿ ಚರ್ಚಿಸಿ ಅನುದಾನ ಕೊಡಿಸಲಿ ಎಂದು ಆಗ್ರಹಿಸಿದರು.
ಬಿಜೆಪಿಯವರು ಬರ ಅಧ್ಯಯನ ಮಾಡುವುದು ಬೇಡ ಎಂದು ನಾವು ಹೇಳಲ್ಲ. ಆದರೆ ರಾಜಕೀಯ ದುರುದ್ದೇಶಕ್ಕಾಗಿ ಬರ ಅಧ್ಯಯನ ಪ್ರವಾಸ ಮಾಡುತ್ತಿದ್ದಾರೆ. ಕೇದ್ರ ಸರ್ಕಾರ ನಮ್ಮ ಸಚಿವರಿಗೆ ಭೇಟಿಗೂ ಸಮಯ ನೀಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.