ಬೆಂಗಳೂರು: ಬಿಜೆಪಿಯವರು ಕೇವಲ ಸ್ವಾತಂತ್ರ್ಯದ ಫಲಾನುಭವಿಗಳು. ಸ್ವತಂತ್ರ್ಯ ಹೋರಾಟಕ್ಕೆ ಬಿಜೆಪಿಯವರ ಕೊಡುಗೆ ಏನೂ ಇಲ್ಲ, ಅವರಿಗೆ ದೇಶ ಆಳುವುದಕ್ಕೆ ಅರ್ಹತೆಯೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ 134 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯ ಯಾರೂ ದೇಶದ ಸ್ವಾತಂತ್ರ್ಯಕ್ಕಾಗಿ ಅಪ್ಪಿ ತಪ್ಪಿಯೂ ಹೋರಾಡಿದವರಲ್ಲ. ಒಬ್ಬೇ ಒಬ್ಬ ಬಿಜೆಪಿ ಪರಿವಾರದ ಸದಸ್ಯ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಜೈಲು ಸೇರಿಲ್ಲ ಎಂದು ವ್ಯಂಗ್ಯವಾಡಿದರು.
ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ ಎನ್ನುವ ಕೀಳರಿಮೆ ಮತ್ತು ಅಳುಕಿನಿಂದ ಸ್ವಾತಂತ್ರ್ಯ ಹೋರಾಟಗಾರರಾಗಿ 9 ವರ್ಷ ಜೈಲು ವಾಸ ಅನುಭವಿಸಿ 17 ವರ್ಷ ದೇಶದ ಪ್ರಧಾನಿ ಆಗಿದ್ದ ನೆಹರೂ ಅವರನ್ನು ಆಡಿಕೊಳ್ಳುವುದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.
ಪ್ರಜಾಪ್ರಭುತ್ವ ಮತ್ತು ಸಂವಿಧಾನದಲ್ಲಿ ನೆಹರೂ ಅವರಿಗೆ ಅಪಾರ ನಂಬಿಕೆ ಇತ್ತು. 17 ವರ್ಷಗಳ ಕಾಲ ಪ್ರಧಾನಿ ಆಗಿದ್ದ ನೆಹರೂ ಅವರು ಚರ್ಚೆ, ಸಂವಾದದಲ್ಲಿ ನಂಬಿಕೆ ಇಟ್ಟುಕೊಂಡಿದ್ದರು. ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಶ್ರಮಿಸುವವರ ಕಟು ಟೀಕೆಗಳನ್ನೂ ಅತ್ಯಂತ ಸಹನೆಯಿಂದ ಸ್ವೀಕರಿಸುತ್ತಿದ್ದರು. ಅಷ್ಟು ದೊಡ್ಡ ವ್ಯಕ್ತಿತ್ವ ನೆಹರೂ ಅವರದ್ದಾಗಿತ್ತು. ವಿಶ್ವ ಮಟ್ಟದಲ್ಲಿ ಭಾರತ ತಲೆ ಎತ್ತಿ ನಿಲ್ಲಲು ನೆಹರೂ ಅವರು ಭಾರತ ದೇಶಕ್ಕೆ ಹಾಕಿದ ಭದ್ರ ಬುನಾದಿ ಕಾರಣ ಎಂದು ಹೇಳಿದರು.