ಬೆಂಗಳೂರು: ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಈ ಕುರಿತಂತೆ ಅವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮತ್ತು ರಾಹುಲ್ ಗಾಂಧಿಯವರ ಕಚೇರಿಗೆ ಕರೆ ಮಾಡಿ ಮಾತನಾಡಿದ್ದಾರೆ ಎಂದು ಹೇಳಲಾಗಿದೆ.
ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಹಂಚಿಕೆ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸೂತ್ರವೊಂದನ್ನು ಸಿದ್ಧಪಡಿಸಿ, ಡಿಸೆಂಬರ್ ವರೆಗೂ ರಕ್ಷಾ ರಾಮಯ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಇರಲಿ. ಬಳಿಕ ಮೊಹಮದ್ ನಲಪಾಡ್ ಅವರಿಗೆ ಹೊಣೆ ಹೊರಿಸಬಹುದು ಎಂದು ಸಲಹೆ ನೀಡಿದ್ದು, ಈ ಮೂಲಕ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಗೊಂದಲ ಬಗೆಹರಿಸಲು ಅವರು ಕ್ರಮ ಕೈಗೊಂದ್ದಾರೆ. ಇದಕ್ಕೆ ಸಹಮತ ವ್ಯಕ್ತವಾಗಿದೆ ಎನ್ನಲಾಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಯುವ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಗೆ ಆಕ್ಷೇಪಿಸಿದ್ದು, ರಕ್ಷಾ ರಾಮಯ್ಯ ಅವರನ್ನು ಬದಲಾವಣೆ ಮಾಡಬಾರದು ಅವರನ್ನೇ ಮುಂದುವರಿಸಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಕಚೇರಿಗೆ ಕರೆ ಮಾಡಿ ಮಾತನಾಡಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಜೊತೆಗೂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.