ಮೈಸೂರು: ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ಆರೋಪ ಪ್ರಕರಣದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ವಿರುದ್ಧ ಮತ್ತೊಂದು ಭೂ ಹಗರಣ ಆರೋಪ ಕೇಳಿಬಂದಿದೆ. ಸಾಮಾಜಿಕ ಕಾರ್ಯಕರ್ತ ಗಂಗರಾಜು ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ವಿರುದ್ಧ ಮತ್ತೊಂದು ಭೂ ಅಕ್ರಮ ಆರೋಪ ಮಾಡಿದ್ದು, ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿರುವ ಗಂಗರಾಜು, ಗಣೇಶ್ ದೀಕ್ಷಿತ್ ಎಂಬುವವರಿಂದ ಸಾಮುರು 21,000 ಚದರ ಅಡಿ ಜಾಗವನ್ನು ಸೆ.2023ರಲ್ಲಿ ಖರೀದಿಸಿರುವ ಪಾರ್ವತಿ ಅವರು ಅದು ವಿವಾದಾತ್ಮಕ ಎಂಬುದು ಗೊತ್ತಾಗುತ್ತಿದ್ದಂತೆ ಎರಡು ಸಲ ತಿದ್ದುಪಾಟು ಮಾಡಿದ್ದಾಗ್ಯೂ ಮುಡಾಗೆ ವಾಪಾಸ್ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ 20 ಗುಂಟೆ ಜಾಗವನ್ನು 2023 ಸೆ.29ರಲ್ಲಿ ಸಿಎಂ ಪತ್ನಿ ಪಾರ್ವತಿ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ. ನಗರದ ಕೆ.ಆರ್.ರಸ್ತೆಯಲ್ಲಿರುವ ಸ.ನಂ.454ರ ಗನೇಶ್ ದೀಕ್ಷಿತ್ ಎಂಬುವವರಿಗೆ ಸೇರಿದ 4 ಎಕರೆ 11 ಗುಂಟೆ ಜಾಗ ಅದು. ಅದರಲ್ಲಿ 20 ಗುಂಟೆ ಜಾಗವನ್ನು ಸಿಎಂ ಪತ್ನಿ ಖರೀದಿಸಿದ್ದಾರೆ. 20 ಗುಂಟೆಗೆ 1 ಕೋಟಿ 85 ಲಕ್ಷ ರೂ ನೀಡಿದ್ದರು. ಅದರಲ್ಲಿ 8998 ಚದರಡಿ ಜಾಗ ಮುಡಾಗೆ ಸೇರಿದ್ದು. ರಸ್ತೆ ಹಾಗೂ ಪೈಪ್ ಲೈನ್ ಗೆ ಇದ್ದ ಜಾಗವನ್ನು ಸೇರಿಕೊಂಡು ತಮ್ಮ ಹೆಸರಿಗೆ ಪಾರ್ವತಿ ಅವರು ರಿಜಿಸ್ಟರ್ ಮಾಡಿಸಿಕೊಂಡಿದ್ದರು. ಬಳಿಕ ಎಚ್ಚೆತ್ತು ದಿ.31.8.2024ರಂದು ಮತ್ತೆ ರಿಜಿಸ್ಟರ್ ತಿದ್ದುಪಡಿ ಮಾಡಿಸಿ ಮುಡಾದ ಜಾಗವನ್ನು ಬಿಟ್ಟು ಇನ್ನುಳಿದ 12,782 ಚದರಡಿ ಜಾಗಕ್ಕೆ ಮಾತ್ರ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.