ಶುಕ್ರವಾರದಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎರಡನೇ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಜಯ ಸಾಧಿಸದಿದ್ದರೂ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳದ ಕಾರಣ ಆ ಪಕ್ಷದ ಕುಪೇಂದ್ರ ರೆಡ್ಡಿ ಅವರೂ ಪರಾಭವಗೊಂಡಿದ್ದಾರೆ. ಎರಡು ಪಕ್ಷಗಳ ನಡುವಿನ ಜಗಳವನ್ನು ಯಶಸ್ವಿಯಾಗಿ ಬಳಸಿಕೊಂಡ ಬಿಜೆಪಿ ತನ್ನ ಅಭ್ಯರ್ಥಿ ಲೆಹರ್ ಸಿಂಗ್ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ಸಫಲವಾಗಿದೆ.
ಜೆಡಿಎಸ್ ಜೊತೆಗಿನ ಮೈತ್ರಿಯನ್ನು ವಿರೋಧಿಸಿಕೊಂಡೇ ಬರುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಟ್ಟು ಹಿಡಿದು ಕಾಂಗ್ರೆಸ್ ಹೈಕಮಾಂಡ್ ಮನವೊಲಿಸಿ ಮನ್ಸೂರ್ ಅಲಿಖಾನ್ ಅವರನ್ನು ಎರಡನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದರು. ಆ ಮೂಲಕ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಪರಾಭವಕ್ಕೆ ಕಾರಣರಾಗಿದ್ದು, ಒಂದು ರೀತಿಯಲ್ಲಿ ಪರೋಕ್ಷ ಗೆಲವು ಸಾಧಿಸಿದ್ದಾರೆ.
ಇದಾದ ಬಳಿಕ ರಿಲ್ಯಾಕ್ಸ್ ಮೂಡ್ ನಲ್ಲಿ ಮೈಸೂರಿಗೆ ತೆರಳಿರುವ ಸಿದ್ದರಾಮಯ್ಯನವರು, ಶನಿವಾರದಂದು ಮೈಸೂರಿನ ಕಲಾಮಂದಿರದಲ್ಲಿ ವಕೀಲರ ಸಂಘ ಪ್ರಸ್ತುತಪಡಿಸಿದ ‘ಕುರುಕ್ಷೇತ್ರ’ ಪೌರಾಣಿಕ ನಾಟಕವನ್ನು ವೀಕ್ಷಿಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್.ಸಿ. ಮಹಾದೇವಪ್ಪ, ವಿಧಾನಪರಿಷತ್ ಸದಸ್ಯ ಡಾ. ಡಿ. ತಿಮ್ಮಯ್ಯ ಮಾಜಿ ಶಾಸಕ ಸೋಮಶೇಖರ್ ಸಿದ್ದರಾಮಯ್ಯನವರಿಗೆ ಸಾಥ್ ನೀಡಿದ್ದಾರೆ.