
ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ನಾಯಕ ನಟನಾಗಿ ನಟಿಸಿರುವ ‘ಬನಾರಸ್’ ಸಿನಿಮಾ ಈಗಾಗಲೇ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರ ಮಧ್ಯೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಸಹ ಈ ಸಿನಿಮಾವನ್ನು ವೀಕ್ಷಿಸಿದ್ದಾರೆ.
ಭಾನುವಾರದಂದು ಶಾಸಕ ಜಮೀರ್ ಅಹ್ಮದ್ ಹಾಗೂ ಅವರ ಪುತ್ರ ‘ಬನಾರಸ್’ ಚಿತ್ರದ ನಾಯಕ ಝೈದ್ ಖಾನ್ ಜೊತೆ ಸಿದ್ದರಾಮಯ್ಯನವರು ಚಿತ್ರವನ್ನು ವೀಕ್ಷಿಸಿದ್ದು, ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.
ಝೈದ್ ಖಾನ್ ಹಾಗೂ ಸೋನಂ ಮಾಂಟೆರೋ ಅಭಿನಯದ ‘ಬನಾರಸ್’ ಚಿತ್ರ ವೀಕ್ಷಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದೆ. ನೈಜತೆಯಿಂದ ಕೂಡಿದ ಪಾತ್ರಗಳು, ಸ್ವಾರಸ್ಯಕರವಾದ ಕಥೆಯನ್ನು ಒಳಗೊಂಡಿರುವ ಸದಭಿರುಚಿಯ ಚಲನಚಿತ್ರವಿದು. ಇಂಥ ಚಿತ್ರಗಳ ಸಂಖ್ಯೆ ನೂರಾಗಲಿ. ಚಿತ್ರರಂಗ ಬೆಳೆಯಲಿ. ಚಿತ್ರತಂಡ ಬೆಳೆಯಲಿ. ಎಲ್ಲರಿಗೂ ಒಳಿತಾಗಲಿ ಎಂದು ಸಿದ್ದರಾಮಯ್ಯ ಹಾರೈಸಿದ್ದಾರೆ.