ಹಾಸನ: ಸಿದ್ದರಾಮಯ್ಯ ಎಲ್ಲಿ ಸ್ಪರ್ಧಿಸುತ್ತಾರೆ ಎಂಬುದು ಬಿಜೆಪಿಯವರಿಗೆ ಏಕೆ? ನರೇಂದ್ರ ಮೋದಿ ಗುಜರಾತ್ ಬಿಟ್ಟು ವಾರಣಾಸಿಯಲ್ಲಿ ಸ್ಪರ್ಧಿಸಲಿಲ್ಲವೇ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಹೇಳಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ರಾಜ್ಯದ ಜಾರ್ಜ್ ಫರ್ನಾಂಡಿಸ್ ಬಿಹಾರ ಮತ್ತು ಮುಂಬೈನಲ್ಲಿ ಸ್ಪರ್ಧಿಸಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಿ ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದರು.
ಸಿದ್ದರಾಮಯ್ಯ ಜನಪ್ರಿಯ ನಾಯಕ, ಮಾಸ್ ಲೀಡರ್ ಆಗಿದ್ದಾರೆ. ಸದನದಲ್ಲಿ ಅಂಕಿ ಅಂಶ ಸಮೇತ ಮೂರ್ನಾಲ್ಕು ಗಂಟೆ ಮಾತನಾಡುವ ನಾಯಕ ಅವರಾಗಿದ್ದಾರೆ. ವರುಣಾ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದೇವೆ. ಅವರು ವರುಣಾ ಕ್ಷೇತ್ರದಿಂದ ಸ್ಪರ್ಧಿಸಿದರೆ ಇಡೀ ರಾಜ್ಯ ಪ್ರವಾಸ ಮಾಡಬಹುದು ಎಂದರು.
ವರುಣಾ ಕ್ಷೇತ್ರದಿಂದ ಸ್ಪರ್ಧಿಸಿ ವಿರೋಧ ಪಕ್ಷದ ನಾಯಕರಾಗಿದ್ದೀರಿ. ಎರಡನೇ ಬಾರಿಗೆ ವರುಣಾ ಕ್ಷೇತ್ರದಿಂದ ಗೆದ್ದಾಗ ಮುಖ್ಯಮಂತ್ರಿ ಆಗಿದ್ದೀರಿ. ವರುಣಾ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿ ಅಭಿವೃದ್ಧಿ ಮಾಡಿದ್ದೀರಿ. ಹಾಗಾಗಿ ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸಿ ಎಂದು ಅವರಿಗೆ ಮನವಿ ಮಾಡಿದ್ದೇವೆ ಎಂದು ಹೇಳಿದರು.