ಬೆಂಗಳೂರು: ಕ್ರೀಡಾಪಟುಗಳಿಗೆ ಶೇ. 2ರಷ್ಟು ಕೋಟಾದಲ್ಲಿ ಸಕಾರಾತ್ಮಕ ನಿರ್ಧಾರ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿಂತನೆ ನಡೆಸಿದ್ದಾರೆ.
ಎಲ್ಲ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ. 2ರಷ್ಟು ಮೀಸಲಾತಿ ನೀಡುವ ಕುರಿತು ಸಕಾರಾತ್ಮಕ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಹೇಳಿದ್ದಾರೆ.
ಶೇ. 2 ರಷ್ಟು ಕೋಟಾವನ್ನು ಪರಿಚಯಿಸಿದರೆ, ಸರ್ಕಾರವು ಈಗಾಗಲೇ ಕ್ರೀಡಾಪಟುಗಳಿಗೆ ಶೇ.3ರಷ್ಟು ಉದ್ಯೋಗಗಳನ್ನು ಮೀಸಲಿಟ್ಟಿರುವ ಪೊಲೀಸ್ ಮತ್ತು ಅರಣ್ಯ ಇಲಾಖೆಗಳಿಗೆ ಅನ್ವಯಿಸುವುದಿಲ್ಲ. ಪೊಲೀಸ್ ಮತ್ತು ಅರಣ್ಯ ಇಲಾಖೆಗಳಲ್ಲಿ ಈಗಾಗಲೇ ಶೇ. 3ರಷ್ಟು ಮೀಸಲಾತಿ ಇದೆ. ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಇತರ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ ಶೇ.2 ರಷ್ಟು ಮೀಸಲಾತಿ ನೀಡುವಂತೆ ಕೋರಿದೆ. ನಾನು ಇದನ್ನು ಪರಿಗಣಿಸಲು ಮತ್ತು ಸಕಾರಾತ್ಮಕ ನಿರ್ಧಾರವನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ರು.
ಇತ್ತೀಚೆಗೆ ನಡೆದ ಹ್ಯಾಂಗ್ಝೌ ಏಷ್ಯನ್ ಗೇಮ್ಸ್ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದ ರಾಜ್ಯದ ಕ್ರೀಡಾಪಟುಗಳಾದ ರಾಜೇಶ್ವರಿ ಗಾಯಕ್ವಾಡ್ (ಕ್ರಿಕೆಟ್), ರೋಹನ್ ಬೋಪಣ್ಣ (ಟೆನಿಸ್), ಮಿಜೋ ಚಾಕೋ ಕುರಿಯನ್ ಮತ್ತು ನಿಹಾಲ್ ಜೋಯಲ್ (ಪುರುಷರ ರಿಲೇ), ಮಿಥುನ್ ಮಂಜುನಾಥ್ ಮತ್ತು ಸಾಯಿ, ಪ್ರತೀಕ್ (ಬ್ಯಾಡ್ಮಿಂಟನ್), ದಿವ್ಯಾ ಟಿಎಸ್ (ಶೂಟಿಂಗ್) ಮತ್ತು ಅದಿತಿ ಅಶೋಕ್ (ಗಾಲ್ಫ್)ಅವರನ್ನು ಸನ್ಮಾನಿಸಿದ ನಂತರ ಸಿಎಂ ಮಾತನಾಡಿದ್ರು.
ರಾಜ್ಯ ಸರ್ಕಾರವು ಪ್ರತಿ ಚಿನ್ನದ ಪದಕ ವಿಜೇತರಿಗೆ ರೂ. 25 ಲಕ್ಷ ಮತ್ತು ಬೆಳ್ಳಿಗೆ ರೂ. 15 ಲಕ್ಷ ನಗದು ಬಹುಮಾನವನ್ನು ನೀಡಿ ಗೌರವಿಸಿತು. ಏಷ್ಯನ್ ಗೇಮ್ಸ್ನಲ್ಲಿ ಕ್ರೀಡಾಪಟುಗಳು ಪದಕ ಗಳಿಸುವಲ್ಲಿ ಕೊಡುಗೆ ನೀಡಿದ ರಾಜ್ಯದ ಕೋಚ್ಗಳಾದ ವಿ. ತೇಜಸ್ವಿನಿ ಬಾಯಿ (ಕಬಡ್ಡಿ), ಅಂಕಿತಾ ಬಿ.ಎಸ್ (ಹಾಕಿ) ಮತ್ತು ಸಿ.ಎ. ಕುಟ್ಟಪ್ಪ (ಬಾಕ್ಸಿಂಗ್) ಅವರನ್ನು ಸಿದ್ದರಾಮಯ್ಯ ಸನ್ಮಾನಿಸಿದ್ರು. ಅವರಿಗೆ ತಲಾ 5 ಲಕ್ಷ ರೂ. ನೀಡಿ ಪುರಸ್ಕರಿಸಿದ್ರು.
ಕ್ರೀಡೆ ಮತ್ತು ಅಥ್ಲೆಟಿಕ್ಸ್ಗೆ ಪ್ರೋತ್ಸಾಹ ನೀಡುವುದು ದೇಶ ಮತ್ತು ರಾಜ್ಯದ ಕರ್ತವ್ಯ. ನಮ್ಮ ಸರ್ಕಾರ ಇದಕ್ಕೆ ಪ್ರೋತ್ಸಾಹ ನೀಡಲಿದೆ ಎಂದು ಸಿದ್ದರಾಮಯ್ಯ ಹೇಳಿದ್ರು. 2017ರಲ್ಲಿ ತಮ್ಮ ಮೊದಲ ಅಧಿಕಾರಾವಧಿಯಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತರಿಗೆ 5 ಕೋಟಿ ರೂ., ಬೆಳ್ಳಿ ಪದಕ ವಿಜೇತರಿಗೆ 3 ಕೋಟಿ ರೂ., ಕಂಚಿಗೆ 2 ಕೋಟಿ ರೂ.ಗಳನ್ನು ನೀಡುವುದಾಗಿ ಸರಕಾರ ಘೋಷಿಸಿತ್ತು ಎಂದು ಸ್ಮರಿಸಿದ್ರು.
ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ ಎಂದು ಸಿದ್ದರಾಮಯ್ಯ ಗಮನಿಸಿದ್ರು. ಏಷ್ಯನ್ ಗೇಮ್ಸ್ನಲ್ಲಿ ಭಾರತ ಮೊದಲ ಅಥವಾ ಎರಡನೇ ಸ್ಥಾನ ಪಡೆಯುವುದು ಹೆಮ್ಮೆಯ ವಿಷಯವಾಗಿದೆ ಎಂದು ಸಿಎಂ ಹೇಳಿದ್ರು.