ನವದೆಹಲಿ: ಹಾಸನದಲ್ಲಿ ಆಯೋಜಿಸಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಸ್ವಾಭಿಮಾನಿ ಸಮಾವೇಶಕ್ಕೆ ಲೋಕಸಭೆ ವಿಪಕ್ಷ ನಾಯಕ, ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಹಾಸನದಲ್ಲಿ ಆಯೋಜಿಸಿದ್ದ ಸ್ವಾಭಿಮಾನಿ ಸಮಾವೇಶಕ್ಕೆ ಕಾಂಗ್ರೆಸ್ ನ ಕೆಲ ನಾಯಕರಿಂದಲೇ ಅಪಸ್ವರ ವ್ಯಕ್ತವಾಗಿತ್ತು. ಅಲ್ಲದೇ ಸ್ವಾಭಿಮಾನಿ ಸಮಾವೇಶದ ಬಗ್ಗೆ ಎಐಸಿಸಿಗೂ ದೂರು ನೀಡಲಾಗಿತ್ತು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಹುಲ್ ಗಾಂಧಿಯವರನ್ನು ಭೇಟಿಯಾಗಿ, ಸ್ವಾಭಿಮಾನಿ ಸಮಾವೇಶ್ವದ ಮಹತ್ವ ವಿವರಿಸಿದ್ದಾರೆ.
ಇದು ನಮ್ಮ ಶಕ್ತಿ ಪ್ರದರ್ಶನಕ್ಕಾಗಿ ಅಲ್ಲ, ಪಕ್ಷದ ಶಕ್ತಿ ಪ್ರದರ್ಶನಕ್ಕಾಗಿ ನಡೆಸುತ್ತಿರುವ ಸಮಾವೇಶ. ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಸಮಾವೇಶ ನಡೆಸುವುದರಿಂದ ಆಗುವ ಲಾಭದ ಬಗ್ಗೆ ವಿವರಿಸಿದ್ದಾರೆ. ಜಿಲ್ಲಾ ಮತ್ತು ತಾಲುಕು ಪಂಚಾಯಿತಿ ಚುನಾವಣೆಗೂ ಅನುಕೂಲವಾಗಲಿದೆ. ಪಕ್ಷದ ಎಲ್ಲಾ ನಾಯಕರೂ ಈ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎಂದು ರಾಹುಲ್ ಗಾಂಧಿ ಅವರಿಗೆ ಸಿಎಂ ಸಿದ್ದರಾಮಯ್ಯ ಸಮಾವೇಶದ ಹಿನ್ನಲೆ ವಿವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಸನದಲ್ಲಿ ನಡೆಯುವ ಸ್ವಾಭಿಮನಿ ಸಮಾವೇಶಕ್ಕೆ ರಾಹುಲ್ ಗಾಂಧಿ ಒಪ್ಪಿಗೆ ಸೂಚಿಸಿದ್ದು, ಅನುಮತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.