ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಮೈಸೂರಿನಲ್ಲಿ ಆಯೋಜಿಸಿದ್ದ ಗ್ರಾಮ ಜನಾಧಿಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಪಕ್ಷದವರು ಕೂಡ ನನ್ನ ಸೋಲಿಗೆ ಪಿತೂರಿ ಮಾಡಿದ್ದರು ಎಂದು ಹೇಳಿದ್ದಾರೆ.
ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ವೇಳೆ ನಾನು ಸೋತಿದ್ದಾರೆ ನನ್ನ ರಾಜಕೀಯ ಭವಿಷ್ಯವೇ ಮಂಕಾಗಿತ್ತು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಾರಿ ಅಂತರದಿಂದ ನಾನು ಸೋಲು ಕಂಡಿದ್ದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
ಸಮ್ಮಿಶ್ರ ಸರ್ಕಾರ ಬೀಳಲು ಕುಮಾರಸ್ವಾಮಿ ಅವರೇ ಕಾರಣ. ನಾನು ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ಬೇಡ ಎಂದಿದ್ದರೆ ಆಗುತ್ತಿರಲಿಲ್ಲ. ಅವರು ಶಾಸಕರಿಗೆ ಸ್ಪಂದಿಸದೆ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಕುಳಿತುಕೊಂಡು ಸರ್ಕಾರ ನಡೆಸಲು ಹೋಗಿ ಹಾಗಾಯ್ತು. ಕುಣಿಯಲಾರದವರು ನೆಲ ಡೊಂಕು ಎನ್ನುವಂತೆ ಕುಮಾರಸ್ವಾಮಿ ಮಾತನಾಡಿರುವುದಾಗಿ ಟೀಕಿಸಿದ್ದಾರೆ.
ಚಾಮುಂಡೇಶ್ವರಿ ನನಗೆ ರಾಜಕೀಯ ಮರು ಜನ್ಮ ಕೊಟ್ಟ ವಿಧಾನಸಭಾ ಕ್ಷೇತ್ರವಾಗಿದೆ. ಅದೇ ರೀತಿ ರಾಜಕೀಯವಾಗಿ ವೇದನೆ ನೀಡಿದ ಕ್ಷೇತ್ರವೂ ಆಗಿದೆ. ಭಾರಿ ಮತಗಳ ಅಂತರದಿಂದ ನಾನು ಈ ಕ್ಷೇತ್ರದಲ್ಲಿ ಸೋಲುತ್ತೇನೆ ಎಂದುಕೊಂಡಿರಲಿಲ್ಲ. ನನ್ನ ಸೋಲಿಗೆ ಜೆಡಿಎಸ್, ಬಿಜೆಪಿ ಹಾಗೂ ನಮ್ಮ ಕಾಂಗ್ರೆಸ್ ಪಕ್ಷದವರು ಕೂಡ ಕಾರಣ ಎಂದು ಅವರು ಹೇಳಿದ್ದಾರೆ. ಸಿದ್ಧರಾಮಯ್ಯ ಅವರು ನೀಡಿದ ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.