ಹುಬ್ಬಳ್ಳಿ: ಡಿ.ಕೆ. ಶಿವಕುಮಾರ್ ಗೆ ಸಿಎಂ ಸ್ಥಾನ ಬಿಟ್ಟು ಕೊಡುವಂತೆ ಸ್ವಾಮೀಜಿ ಮನವಿ ಮಾಡಿದ ವಿಚಾರದ ಬಗ್ಗೆ ಬೆಳಗಾವಿ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಐದು ವರ್ಷ ಸಿಎಂ ಎನ್ನುವ ಕ್ಲಿಯರ್ ಸಿಗ್ನಲ್ ಕೊಡಬೇಕಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೈಕಟ್ಟಿ ಹಾಕುವ ಕೆಲಸ ನಡೆಯುತ್ತಿದೆ. ಇದರಿಂದ ರಾಜ್ಯದಲ್ಲಿ ಅತಂತ್ರ ಸರ್ಕಾರ ಆಗುತ್ತದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ಎಂದು ಗೊಂದಲ ನಿರ್ಮಾಣ ಮಾಡಲಾಗುತ್ತಿದೆ. ಇಂತಹ ಪರಿಸ್ಥಿತಿಯಿಂದ ರಾಜ್ಯ ಸರ್ಕಾರಕ್ಕೂ ಡ್ಯಾಮೇಜ್ ಆಗುತ್ತದೆ. ಏನು ಹೇಳಬೇಕು ಎನ್ನುವುದನ್ನು ಹೈಕಮಾಂಡ್ ಮುಂದೆ ಹೇಳಬೇಕು. ಸಿಎಂ ಹುದ್ದೆಗಾಗಿ ಮೊದಲಿನಿಂದಲೂ ಗುದ್ದಾಟ ಇದ್ದೇ ಇದೆ. ಬಿಜೆಪಿ ಆಪರೇಷನ್ ಕಮಲ ಮತ್ತೊಂದು ಮಾಡುವುದು ಬೇಕಾಗಿಲ್ಲ. ಕಾಂಗ್ರೆಸ್ ಒಳ ಬೇಗುದಿಯಿಂದಲೇ ಸರ್ಕಾರಕ್ಕೆ ಎಫೆಕ್ಟ್ ಆಗುತ್ತದೆ ಎಂದು ಹೇಳಿದ್ದಾರೆ.
ಗ್ಯಾರಂಟಿ ಅನುಷ್ಠಾನಕ್ಕಾಗಿ ಸರ್ಕಾರದ ಖಜಾನೆ ಖಾಲಿ ಆಗುತ್ತಿದೆ. ವರಮಾನ ಹೆಚ್ಚಿಸಿಕೊಳ್ಳಲು ಎಲ್ಲಾ ವಸ್ತುಗಳ ದರ ಏರಿಕೆ ಮಾಡಿದ್ದಾರೆ. ಜನಸಾಮಾನ್ಯರು, ಬಡವರು ಬಹಳ ಸಂಕಷ್ಟ ಅನುಭವಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಯಿಂದ ರಾಜ್ಯದ ಜನರಿಗೆ ತೊಂದರೆಯಾಗುತ್ತಿದೆ ಎಂದು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ ಎಂದು ಶೆಟ್ಟರ್ ಹೇಳಿದ್ದಾರೆ.