ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಎಫ್ಐಆರ್ ದಾಖಲಾಗಿದೆ.
ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮೇಲೆ ಇಂದು ನಡೆದ ಪ್ರಜಾಪ್ರಭುತ್ವ ದಿನದ ಅಂಗವಾಗಿ ಬೃಹತ್ ಮಾನವ ಸರಪಳಿ ಚಳುವಳಿಗೆ ಚಾಲನೆ ಕಾರ್ಯಕ್ರಮದ ವೇಳೆ ವ್ಯಕ್ತಿಯೋರ್ವ ಏಕಾಏಕಿ ವೇದಿಕೆ ಮೇಲೆ ಜಂಪ್ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರತ್ತ ನುಗ್ಗಲು ಯತ್ನಿಸಿದ್ದ. ತಕ್ಷಣ ಎಚ್ಚೆತ್ತ ಭದ್ರತಾ ಸಿಬ್ಬಂದಿ, ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದರು. ಆದರೂ ಆತ ತನ್ನ ಬಳಿ ಇದ್ದ ಕೇಸರಿ ಶಾಲನ್ನು ಮುಖ್ಯಮಂತ್ರಿಗಳತ್ತ ಎಸೆದು ಹೈಡ್ರಾಮಾ ಮಾಡಿದ್ದ. ಇದೀಗ ಪ್ರಕರಣ ಸಂಬಂಧ ಎಫ್ಐಆರ್ ದಾಖಲಾಗಿದೆ.
ಕನಕಪುರ ಮೂಲದ ಮಹದೇವ್ ನಾಯ್ಕ್ ವಿರುದ್ಧ ಮೊಕದ್ದಮೆ ದಾಖಲಾಗಿದೆ. ವಿಧಾನಸೌಧ ಠಾಣೆಯಲ್ಲಿ ಬಿಎನ್ಎಸ್ ಕಾಯ್ದೆ 329,(3), 132, 292 ಅಡಿ ಎಫ್ಐಆರ್ ದಾಖಲಾಗಿದೆ.
ಆರೋಪಿ ಮಹದೇವ್ ನಾಯ್ಕ್ ಖಾಸಗಿ ಶೋ ರೂಂ ನಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಆರೋಪಿಯನ್ನು ಬಂಧಿಸಿರುವ ವಿಧಾನಸೌಧ ಠಾಣೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.