ಮೈಸೂರು: ಮುಡಾ ಹಗರಣದಲ್ಲಿ ನನ್ನ ಪಾತ್ರವಿಲ್ಲ. ಯಾವುದೇ ಪರಿಶೀಲನೆ ನಡೆಸದೇ ರಾಜ್ಯಪಾಲರು ಏಕಾಏಕಿ ಶೋಕಾಸ್ ನೋಟಿಸ್ ಜಾರಿ ಮಾಡಿರುವ ಕ್ರಮ ಕಾನೂನು ಬಾಹಿರ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಟಿ.ಜೆ ಅಬ್ರಹಾಂ ಓರ್ವ ಬ್ಲ್ಯಾಕ್ ಮೇಲರ್. ಅವನ ದೂರಿನ ಮೇಲೆ ರಾಜ್ಯಪಾಲರ ಕ್ರಮ ಕಾನೂನು ಬಾಹಿರ. ಟಿ.ಜೆ.ಅಬ್ರಹಾಂ ಅನೇಕ ಜನರ ಮೇಲೆ ಇದೇ ರೀತಿ ದೂರು ನೀಡಿದ್ದಾನೆ. ಆದರೆ ನಾನು ಯಾವುದೇ ಅಪರಾಧ ಮಾಡಿಲ್ಲ. ಮುಡಾ ಹಗರಣದಲ್ಲಿ ನನ್ನ ಪಾತ್ರವಿಲ್ಲ. ಆದಾಗ್ಯೂ ನನಗೆ ನೋಟಿಸ್ ನೀಡಿರುವ ಕ್ರಮ ಸರಿಯಿಲ್ಲ ಎಂದು ಕಿಡಿಕಾರಿದರು.
ಜುಲೈ 26ರಂದು ಬೆಳಿಗ್ಗೆ 11:30ಕ್ಕೆ ಟಿ.ಜೆ ಅಬ್ರಹಾಂ ದೂರು ನೀಡುತ್ತಾನೆ. ದೂರಿನ ಪರಾಮರ್ಶೆಯನ್ನೂ ಮಾಡದೇ ರಾಜ್ಯಪಾಲರು ಆತುರವಾಗಿ ಸಂಜೆ ನೋಟಿಸ್ ಕೊಡುತ್ತಾರೆ. ನೋಟಿಸ್ ಕೊಟ್ಟಿರುವ ಕ್ರಮವೇ ಕಾನೂನು ಬಾಹಿರ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವ ಯತ್ನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.