ಮೈಸೂರು: ನನ್ನ ಹಾಗೂ ನನ್ನ ಜೊತೆಗಿರುವವರ 40 ಜನರ ಫೋನ್ ನನ್ನು ಸರ್ಕಾರ ಟ್ಯಾಪ್ ಮಾಡಿದೆ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಡೈವರ್ಟ್ ಮಾಡಲು ಕುಮಾರಸ್ವಾಮಿ ಏನೇನೋ ಆರೊಪ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಮೊದಲು ಈ ನೆಲದ ಕಾನೂನಿಗೆ ಗೌರವ ಕೊಡಬೇಕು ಎಂದು ಕಿಡಿಕಾರಿದರು.
ಪ್ರಜ್ವಲ್ ಪಾಸ್ ಪೋರ್ಟ್ ರದ್ದು ಮಾಡುವಂತೆ ನಾನು ಎರಡು ಬಾರಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದೇನೆ. ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನನ್ನ ಪತ್ರಕ್ಕೆ ಈವರೆಗೆ ಪ್ರಧಾನಿಯವರು ಉತ್ತರಿಸಿಲ್ಲ. ಒಬ್ಬ ಸಿಎಂ ಪತ್ರ ಬರೆದಾಗ ಉತ್ತರ ಕೊಡುತ್ತಾರೆ ಎಂಬ ವಿಶ್ವಾಸವಿದೆ. ನೋಡೋಣ ಎರಡನೇ ಪತ್ರಕ್ಕಾದರೂ ಉತ್ತರ ಕೊಡುತ್ತಾರಾ ಅಂತಾ ಎಂದು ಹೇಳಿದರು.
ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ, ಲೈಂಗಿಕ ಕಿರುಕುಳದಂತಹ ಗಂಭೀರ ಆರೋಪವಿದೆ. ಈ ವಿಚಾರವನ್ನು ಡೈವರ್ಟ್ ಮಾಡಲೆಂದು ಕುಮಾರಸ್ವಾಮಿ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಹೆಸರು ಹೇಳುತ್ತಿದ್ದಾರೆ. ಪ್ರಜ್ವಲ್, ರೇವಣ್ಣ, ದೇವೇಗೌಡರು, ಮನೆಯವರಿಗೆಲ್ಲ ಗೊತಿಲ್ಲದೇ ಹೋಗಿದ್ದಾನಾ? ಪ್ರಜ್ವಲ್ ಕುಟುಂಬದವರ ಜೊತೆ ಸಂಪರ್ಕದಲ್ಲಿ ಇಲ್ವಾ? ಪ್ರಜ್ವಲ್ ವಿಚಾರ ಅವರ ಕುಟುಂಬಕ್ಕೆ ಎಲ್ಲವೂ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.