ಬೆಂಗಳೂರು: ರಾಜ್ಯಪಾಲರು ಪದೇ ಪದೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲರು ಸಣ್ಣ ಸಣ್ಣ ಕ್ಷುಲ್ಲಕ ವಿಷಯಗಳಿಗೂ ಪತ್ರ ಬರೆದು ಉತ್ತರ ಕೇಳುತ್ತಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಯಾರೋ ಒಬ್ಬ, ಅವರು ಕನ್ನಡದಲ್ಲಿ ಸಹಿ ಹಾಕುತ್ತಿದ್ದರು. ಆದರೆ ಇಂಗ್ಲೀಷಿನಲ್ಲಿ ಸಹಿ ಹಾಕಿದ್ದಾರೆ ಎಂದು ನನ್ನ ಮೇಲೆ ದೂರು ನೀಡಿದ್ದಾನೆ. ಆತನ ದೂರನ್ನು ಪರಿಗಣಿಸಿರುವ ರಾಜ್ಯಪಾಲರು ಇಂಗ್ಲೀಷಿನಲ್ಲಿ ಯಾಕೆ ಸಹಿ ಮಾಡಿಲ್ಲ? ಎಂದು ಪತ್ರ ಬರೆದಿದ್ದಾರೆ ಎಂದು ಕಿಡಿಕಾರಿದರು.
ಕನ್ನಡಲ್ಲಿ ಇರುವ ಡ್ರಾಪ್ಟ್ ಗಳಿಗೆ ಕನ್ನದಲ್ಲಿ ಸಹಿ ಮಾಡುತ್ತೇನೆ. ಇಂಗ್ಲೀಷನಲ್ಲಿ ಇರುವ ಪತ್ರಗಳಿಗೆ, ಕೇಂದ್ರ ಸರ್ಕಾರಕ್ಕೆ ಕಳಿಸುವ ಪತ್ರಗಳಿಗೆ ಇಂಗ್ಲೀಷಿನಲ್ಲಿ ಸಹಿ ಮಾಡುತ್ತೇನೆ. ಅದರಲ್ಲಿ ತಪ್ಪೇನಿದೆ? ಸಹಿ ಯಾವ ಭಾಷೆಯಲ್ಲಾದರೂ ಮಾಡಬಹುದು ಅದರಲ್ಲಿ ತಪ್ಪಿಲ್ಲ. ಯಾರೋ ದೂರು ಕೊಟ್ಟಿದ್ದಾರೆ ಎಂದು ಇಂಗ್ಲೀಷಿನಲ್ಲಿ ಸಹಿ ಯಾಕೆ ಮಾಡಿಲ್ಲ ಎಂದು ಪತ್ರ ಬರೆದಿದ್ದಾರೆ. ಇದು ವಿಷಯವೇ? ರಾಜ್ಯಪಾಲರು ಇಂತಹ ಕ್ಷುಲ್ಲಕ ಕಾರಣಕ್ಕೆ ಸರ್ಕಾರಕ್ಕೆ ಪತ್ರ ಬರೆದು ಕೇಳುತ್ತಿದ್ದಾರೆ ಇದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಅರ್ಕಾವತಿ ಪ್ರಕರಣ ಸಂಬಂಧ ರಾಜ್ಯಪಾಲರು ಸರ್ಕಾರಕ್ಕೆ ಮತ್ತೊಂದು ಪತ್ರ ಬರೆದ ವಿಚಾರವಾಗಿ ಬಿಜೆಪಿಯವರು ಹಿಂದೆ ನಾಲ್ಕು ವರ್ಷ ಅಧಿಕಾರದಲ್ಲಿದ್ದಾಗ ವಿಷಯವನ್ನು ಯಾಕೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಿಲ್ಲ? ಈ ವಿಚಾರವಾಗಿ ಸಿ.ಟಿ.ರವಿ ಈಗ ರಾಜ್ಯಪಾಲರಿಗೆ ಪತ್ರ ಬರೆದಿದ್ದು, ಹಿಂದೆ ಅವರೇ ಸಚಿವರಾಗಿದ್ದಾಗ ಯಾಕೆ ಕ್ರಮ ಕೈಗೊಳ್ಳಲಿಲ್ಲ? ಎಂದು ಪ್ರಶ್ನಿಸಿದರು. ರಾಜ್ಯಪಾಲರ ಪತ್ರದ ಬಗ್ಗೆ ಪರಿಶೀಲಿಸಲಾಗುವುದು ಎಂದರು.