ಮೈಸೂರು: ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್ ಗೆ ಸಂಬಂಧಿಸಿದಂತೆ ವಾರಂಟ್ ಜಾರಿ ವಿಚಾರವಾಗಿ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದ ವಿಪಕ್ಷ ನಾಯಕರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ದೇವೇಗೌಡರ ಕುಟುಂಬದ ನಂತರ ಯಡಿಯೂರಪ್ಪ ಅವರ ಕುಟುಂಬವನ್ನು ಗುರಿಮಾಡಲಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದ್ರಾಮಯ್ಯ, ನಮ್ಮ ಮೇಲೆ, ಡಿ.ಕೆ. ಶಿವಕುಮಾರ್, ರಾಹುಲ್ ಗಾಂಧಿ ಅವರ ಮೇಲೆ ಕೇಸು ಹಾಕಿರುವುದನ್ನು ಏನೆಂದು ಕರೆಯಬೇಕು? ರಾಹುಲ್ ಗಾಂಧಿ ಅವರ ಸಂಸದ ಸ್ಥಾನವನ್ನೇ ರದ್ದುಗೊಳಿಸಿದ್ದನ್ನು ಏನೆಂದು ಕರೆಯುವುದು ಎಂದು ಪ್ರಶ್ನಿಸಿದರು.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಜೈಲಿಗೆ ಕಳಿಸಿದ್ದನ್ನು ಏನೆಂದು ಕರೆಯಬೇಕು? ಇದು ದ್ವೇಷದ ರಾಜಕಾರಣವೋ ಇಲ್ಲ ಪ್ರೀತಿಯ ರಾಜಕಾರಣ ಎಂದು ಕರೆಯಬೇಕೋ? ಸೇಡಿನ ರಾಜಕಾರಣ ಮಾಡುವುದು ಅವರು ನಾವು ಯಾವತ್ತೂ ಸೇಡಿನ ರಾಜಕಾರಣ ಮಾಡುವುದಿಲ್ಲ ಎಂದರು.
ನಾನು ನಿನ್ನೆ ಮೊನ್ನೆ ರಾಜಕೀಯಕ್ಕೆ ಬಂದಿಲ್ಲ. ದ್ವೇಷದ ರಾಜಕಾರಣವನ್ನು ನಾನು ಇಂದಿನವರೆಗೆ ಯಾರ ಮೇಲೂ ಮಾಡಿಲ್ಲ. ಅದು ಬಿಜೆಪಿಯವರ ಕೆಲಸ ಎಂದು ಹೇಳಿದರು.