
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ವಿಚಾರವಾಗಿ ಕಿಡಿಕಾರಿರುವ ಸಿಎಂ ಸಿದ್ದರಾಮಯ್ಯ, ಕರ್ನಾಟಕಕ್ಕೆ ಅಮಿತ್ ಶಾ ಬರಿಗೈಯಲ್ಲಿ ಬಂದಿದ್ದಾರೆ. ಬಡವರು, ರೈತರ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರೈತ ಸಂಘಟನೆ ಹಾಗೂ ಮುಖಂಡರುಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ತೀವ್ರ ಬರಗಾಲವಿದೆ. 2-3 ಬಾರಿ ಪತ್ರ ಬರೆದಿದ್ದೇವೆ. ಐದು ತಿಂಗಳು ಕಳೆದರೂ ಇದುವರೆಗೆ ಒಂದು ಸಭೆಯನ್ನೂ ಅಮಿತ್ ಶಾ ಕರೆದಿಲ್ಲ. ಬರಪರಿಹಾರ ಕೊಡಲು ಇರುವ ಸಮಿತಿಗೆ ಅವರೇ ಅಧ್ಯಕ್ಷರು. ದೇಶದ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದ್ದಾರೆ.
ರೈತರು ಬರಗಾಲದಲ್ಲಿ ಕಷ್ಟಪಡುತ್ತಿದ್ದಾರೆ. ಬರಗಾಲ ಬಂದಾಗ ಎಂ.ಎನ್. ನರೇಗಾ ಯೋಜನೆಯಡಿ 150 ಮಾನವದಿನಗಳನ್ನು ಹೆಚ್ಚಿಸುವುದು ಕಡ್ಡಾಯವಾದರೂ ಇಂದಿನವರೆಗೆ ಹೆಚ್ಚಿಸಿಲ್ಲ. ನಮ್ಮ ಪತ್ರಕ್ಕೂ ಉತ್ತರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿರ್ಮಲಾ ಸೀತಾರಾಮನ್ ಅವರು ತಕ್ಕ ಉತ್ತರ ನೀಡಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದಾರೆ. ದೇವೇಗೌಡರು ಈಗ ಬಿಜೆಪಿ ಜೊತೆ ಜೊತೆ ಸೇರಿದ್ದಾರೆ. ಇದೇ ದೇವೆಗೌಡರು ಈ ಹಿಂದೆ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಬೇಕು ಎಂದಿದ್ದರು. ಈಗ ದೇವೇಗೌಡರು ಏನು ಹೆಳುತ್ತಿದ್ದಾರೆ? ಅವರು ಯಜಮಾನರು, ಮಾಜಿ ಪ್ರಧಾನಿಗಳಾಗಿದ್ದವರು ಹೀಗೆ ಹೇಳಬಾರದು. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂಬ ಕಾರಣಕ್ಕೆ ಅವರು ಮಾಡಿದ ಅನ್ಯಾಯವನ್ನೆಲ್ಲಾ ಸರಿ ಎಂದು ಹೇಳಬಾರದು ಎಂದರು.