ಬಾಗಲಕೋಟೆ: ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಆರೋಪಿಸಿದ್ದ 40% ಕಮಿಷನ್ ಆರೋಪ ಸುಳ್ಳು ಎಂಬುದು ಲೋಕಾಯುಕ್ತ ತನಿಖೆಯಲ್ಲಿ ಸಾಬೀತಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ. ವಿಪಕ್ಷ ನಾಯಕರ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಕೆಲ ವಿಚಾರಗಳು ಸಾಕ್ಷ್ಯವೇ ಸಿಗದೇ ವಜಾ ಆಗುತ್ತವೆ ಎಂದಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, 40% ಕಮಿಷನ್ ಆರೋಪದಿಂದ ಮುಕ್ತರಾಗಿದ್ದೇವೆ ಎನ್ನುವ ಆರ್.ಅಶೋಕ್ ಮಾತಿಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿದ್ದ ಕೆಂಪಣ್ಣ ಅವರು ಕೊಟ್ಟ ದೂರಿನ ಆಧಾರದಲ್ಲಿ ನಾವು ತನಿಖೆಗೆ ಸೂಚಿಸಿದ್ದೆವು. ಸಾಕ್ಷ್ಯಾಧಾರಗಳ ಕೊರತೆಯಿಂದ ಕೊಲೆ ಆರೋಪಿಗಳು ಬಿಡುಗಡೆ ಆಗುತ್ತಾರೆ. ಹಾಗಂತ ಕೊಲೆಯೇ ಆಗಿಲ್ಲ ಅಂದರೆ ಅದರಲ್ಲಿ ಅರ್ಥ ಇಲ್ಲ. ಕೊಲೆ ನಡೆದಿರುತ್ತದೆ. ಸಾಕ್ಷಿಗಳು ಸಾಕ್ಷ್ಯ ಹೇಳಿರುವುದಿಲ್ಲ ಅಷ್ಟೆ. ಅನೇಕ ವಿಚಾರಗಳು ಸಾಕ್ಷ್ಯ ಸಿಗದೇ ವಜಾ ಆಗುತ್ತವೆ ಎಂದು ಹೇಳಿದರು.
ಆಪರೇಷನ್ ಕಮಲಕ್ಕಾಗಿ ಕಾಂಗ್ರೆಸ್ ಶಾಸಕರಿಗೆ ತಲಾ 50 ಕೋಟಿ ಆಫರ್ ನೀಡಲಾಗಿತ್ತು ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ಆಪರೇಷನ್ ಕಮಲಕ್ಕೆ ಪ್ರಯತ್ನಿಸಿದರು, ವಿಫಲರಾದರು ಎಂದಿದ್ದಾರೆ.