ಬೆಂಗಳೂರು: ರಾಜ್ಯಕ್ಕೆ ಕೊಡಬೇಕಿರುವ 18 ಸಾವಿರದ 172 ಕೋಟಿ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ರಾಜ್ಯ ಕಾಂಗ್ರೆಸ್ ನಾಯಕರು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಸಿಎಂ , ಸಚಿವರು ಹಾಗೂ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಖಂಡಿಸಿದರು.
ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಂದು ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಮೊದಲು ಬರ ಪರಿಹಾರವನ್ನು ಕೊಟ್ಟು ನಂತರ ಬರಲಿ. ತಕ್ಷಣ ಸಭೆ ನಡೆಸಿ ಬರ ಪರಿಹಾರ ಕೊಡಲಿ ಎಂದು ಪ್ರತಿಭಟನೆ ನಡೆಸಿದ್ದೇವೆ ಎಂದರು.
ರಾಜ್ಯಕ್ಕೆ 18 ಸಾವಿರದ 172 ಕೋಟಿ ಬರ ಪರಿಹಾರ ಹಣ ಕೊಟ್ಟು ರಾಜ್ಯಕ್ಕೆ ಬನ್ನಿ. ಪ್ರಧಾನಿ ಮೋದಿ, ಅಮಿತ್ ಶಾ ಬರ ಪರಿಹಾರ ಕೊಟ್ಟಮೇಲೆಯೇ ರಾಜ್ಯಕ್ಕೆ ಬರಲಿ ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಭೀಕರ ಬರಗಾಲವಿದೆ. ಕೇಂದ್ರ ಸರ್ಕಾರಕ್ಕೆ ಬರ ಪರಿಹಾರ ಬಿಡುಗಡೆ ಮಾಡುವಂತೆ ಹಲವು ಬಾರಿ ಮನವಿ ಮಾಡಿದೆವು. ಈವರೆಗೂ ನಯಾಪೈಸೆ ಬಿಡುಗಡೆ ಮಾಡಿಲ್ಲ. ಅನಿವಾರ್ಯವಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಾಯಿತು. ಈಗ ನ್ಯಾಯಾಲಯದಲ್ಲಿ ಹಣ ಬಿಡುಗಡೆ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ. ತಕ್ಷಣ ಹಣ ಬಿಡುಗಡೆ ಮಾಡಲಿ ಎಂದರು.
ರಾಜ್ಯದಲ್ಲಿ ರೈತರು ಬರದಿಂದ ಕಂಗೆಟ್ಟಾಗ ಮೋದಿ, ಅಮಿತ್ ಶಾ ರಾಜ್ಯಕ್ಕೆ ಬರಲಿಲ್ಲ, ಈ ಹಿಂದೆ ಪ್ರವಾಹ ಬಂದು ಸಮಸ್ಯೆಯಾದಾಗಲೂ ಬರಲಿಲ್ಲ. ಈಗ ಚುನಾವಣೆ ಹಿನ್ನೆಲೆಯಲ್ಲಿ ಬರುತ್ತಿದ್ದಾರೆ. ಕರ್ನಾಟಕದ ಜನರನ್ನು ಧ್ವೇಷಮಾಡುವ ಮೋದಿ, ಅಮಿತ್ ಶಾಗೆ ಚುನಾವಣೆ ಬಂದಾಗ ಕರ್ನಾಟಕ ನೆನಪಾಗುತ್ತದೆ. ಈಗ ಯಾವ ಮುಖವಿಟ್ಟುಕೊಂಡು ಬರುತ್ತಿದ್ದಾರೆ? ರಾಜ್ಯದ ಜನರ ಬಳಿ ಮತ ಕೇಳಲು ಅವರಿಗೆ ನೈತಿಕ ಹಕ್ಕಿಲ್ಲ. ಗೋ ಬ್ಯಾಕ್ ಮೋದಿ, ಗೋ ಬ್ಯಾಕ್ ಅಮಿತ್ ಶಾ ಎಂದು ಹೇಳುತ್ತಿದ್ದೇವೆ ಎಂದು ಗುಡುಗಿದರು.