
ಬೆಂಗಳೂರು: ಎರಡು ವಾರಗಳ ಕಾಲ ನಡೆದ ಮುಂಗಾರು ಅಧಿವೇಶನದಲ್ಲಿ ವಿಪಕ್ಷ ಬಿಜೆಪಿ-ಜೆಡಿಎಸ್ ಸದಸ್ಯರು ಯಾವುದೇ ವಿಷಯಗಳ ಚರ್ಚೆ ನಡೆಸದೇ ಪ್ರತಿಭಟನೆಗಳಲ್ಲೇ ಕಾಲ ಹರಣ ಮಾಡುವ ಮೂಲಕ ಕಲಾಪ ಮುಗಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದ ಪ್ರವಾಹದ ಬಗ್ಗೆ ವಿಪಕ್ಷದವರು ಚರ್ಚೆ ಮಾಡಿಲ್ಲ. ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿಲ್ಲ. ಮುಡಾ ಪ್ರಕರಣದ ಬಗ್ಗೆ ಆಧಾರ ರಹಿತವಾಗಿ ಕಾನೂನು ಬಾಹಿರ ನಿಲುವಳಿ ಸೂಚನೆ ಮಂಡಿಸಿದರು. ನಿಯಮಗಳಿಗೆ ವಿರುದ್ಧವಾಗಿರುವುದರಿಂದ ಸ್ಪೀಕರ್ ಚರ್ಚೆಗೆ ಅವಕಾಶ ನೀಡಿಲ್ಲ. ಬಿಜೆಪಿ-ಜೆಡಿಎಸ್ ಸದಸ್ಯರು ರಾಜಕೀಯ ದುರುದ್ದೇಶದಿಂದ ಸಿಎಂ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಯತ್ನ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.
ಕಳೆದ 40 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಿದ್ದರಿಂದ ಬಿಜೆಪಿ- ಜೆಡಿಎಸ್ ನವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇಲ್ಲಸಲ್ಲದ ಕುತಂತ್ರ ಮಾಡುತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡರೂ ಸೋಲನುಭವಿಸಿದ ಕಾರಣಕ್ಕೆ ಹತಾಶೆಯಿಂದ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿಯವರು ಜನರ ವಿಶ್ವಾಸಗಳಿಸಲು ವಾಮಮಾರ್ಗ ಅನುಸರಿಸುತ್ತಿದ್ದಾರೆ. ವಿಪಕ್ಷಗಳ ಈ ನಡೆ ಖಂದನೀಯ ಎಂದು ವಾಗ್ದಾಳಿ ನಡೆಸಿದರು.