ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ತನ್ನನ್ನು ಸೇವೆ ಮಾಡಲೆಂದು ದೇವರೇ ಕಳುಹಿಸಿದ್ದಾನೆ ಎಂದು ಹೇಳುತ್ತಿದ್ದಾರೆ. ಪ್ರಧಾನಿ ಮೋದಿ ಏನು ದೇವರ ಅವತಾರಾನಾ? ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಂಡಿತ್ ಜವಾಹರಲಾಲ್ ನೆಹರೂ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ತತ್ವದಲ್ಲಿ ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕಿದ್ದು ಜವಾಹರಲಾಲ್ ನೆಹರೂ. ದೀರ್ಘ ಕಾಲ ದೇಶದ ಪ್ರಧಾನ ಮಂತ್ರಿಯಾಗಿ ಭವಿಷ್ಯದ ಭಾರತವನ್ನು ಕಟ್ಟುವ ಕೆಲಸ ಮಾಡಿದರು. ಭಾರತವನ್ನು ಇಡೀ ವಿಶ್ವದಲ್ಲಿ ಅತಿದೊಡ್ಡ ಮತ್ತು ಸದೃಢ ಪ್ರಜಾಪ್ರಭುತ್ವ ದೇಶವನ್ನಾಗಿ ರೂಪಿಸಿದ್ದು ನೆಹರೂ ಎಂದರು.
ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, ಮೋದಿಯವರಿಗೆ ಬಿಜೆಪಿ, ಎನ್ ಡಿ ಎ ಸೋಲು ಖಚಿತವಾಗಿ ಗೊತ್ತಾಗಿದೆ. ಹಾಗಾಗಿ ಹತಾಶರಾಗಿ ವಿಚಿತ್ರ ವಿಚಿತ್ರವಾಗಿ ಮಾತಾಡುತ್ತಿದ್ದಾರೆ. ದೇವರೇ ನನ್ನನ್ನು ಕಳುಹಿಸಿದ್ದು, ಸೇವೆ ಮಾಡಲೆಂದು ಕಳುಹಿಸಿದ್ದಾರೆ ಎಂದು ಮಾತಾಡುತ್ತಿದ್ದಾರೆ. ಪ್ರಧಾನಿ ಮೋದಿ ಏನು ದೇವರ ಅವತಾರಾನಾ? ಸೋಲಿನ ಭಯದಲ್ಲಿ ಏನೇನೋ ಹೇಳಿಕೆ ಕೊಡುತ್ತಿದ್ದಾರೆ. ಸೋಲಿನ ಭಯ ಮೋದಿಯವರನ್ನು ಈ ಮಟ್ಟಕ್ಕೆ ಮಾಡಿಟ್ಟಿದೆ ಎಂದು ವ್ಯಂಗ್ಯವಾಡಿದರು.
ನಮ್ಮ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ದೇಶವನ್ನು ಮಾರ್ಪಡಿಸಲು ಬಿಜೆಪಿ ಮತ್ತು ಮೋದಿ ಯತ್ನಿಸುತ್ತಿದ್ದು ಇದಕ್ಕೆ ಭಾರತೀಯರು ಅವಕಾಶ ಕೊಡುವುದಿಲ್ಲ ಎಂದರು. ಬಿಜೆಪಿಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲ. ಸಂವಿಧಾನದ ಆಶಯಗಳಲ್ಲಿ ದೇಶವನ್ನು ಮುನ್ನಡೆಸುವುದು ಕಾಂಗ್ರೆಸ್ ಪಕ್ಷ ಮಾತ್ರ ಎಂದರು. ಬಿಜೆಪಿಯವರು ಸರ್ವರಿಗೂ ಸಮ ಬಳು, ಸರ್ವರಿಗೂ ಸಮ ಪಾಲು ಎಂದರು. ಸರ್ವಜನಾಂಗದ ಶಾಂತಿಯ ತೋಟ ಎಂದರು. ಶಾಂತಿಯ ತೋಟವನ್ನಾಗಿಸಲು ಎಂದಾದರೂ ಪ್ರಯತ್ನ ಮಾಡಿದ್ದಾರಾ? ಎಂದು ಕಿಡಿಕಾರಿದರು.