ಕೋಲಾರ: ಲೋಕಸಭಾ ಚುನಾವಣೆಗೆ ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಪ್ರಧಾನಿ ಮೋದಿ ಪ್ರಚಾರದ ಅಲೆಗೆ ಬ್ರೇಕ್ ಹಾಕಲು ರಾಜ್ಯ ಕಾಂಗ್ರೆಸ್ ‘ಚೊಂಬಾಸ್ತ್ರ’ ಪ್ರಯೋಗ ಮಾಡುತ್ತಿದೆ. ಪ್ರಧಾನಿ ಮೋದಿ ಕರ್ನಾಟಕಕ್ಕೆ ಚೊಂಬು ಕೊಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ಪ್ರಕಟಿಸಿದೆ. ಇದೇ ವೇಳೆ ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಿದ ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿ ರಾಜ್ಯಕ್ಕೆ ಖಾಲಿ ಚೊಂಬು ಕೊಟ್ಟಿದ್ದಾರೆ. ಬಡವರ ಸಮಸ್ಯೆಗೆ ಪರಿಹಾರ ನೀಡಲೇ ಇಲ್ಲ. ಅನುದಾನ ಬಿಡುಗಡೆ ಮಾಡಲೇ ಇಲ್ಲ. ಕರ್ನಾಟಕಕ್ಕೆ ಪ್ರಧಾನಿ ಮೋದಿ ಅನ್ಯಾಯ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಪ್ರಧಾನಿ ಆಗುವ ಮೋದಲು ಮೋದಿ ಹಲವು ಭರವಸೆಗಳನ್ನು ಘೋಷಣೆ ಮಾಡಿದರು. ಆದರೆ ಪ್ರಧಾನಿ ಆದ ಬಳಿಕ ಕರ್ನಾಟಕ್ಕೆ ಏನೂ ಕೊಟ್ಟಿಲ್ಲ. ಬರಿ ಖಾಲಿ ಚೊಂಬು ಕೊಟ್ಟಿದ್ದಾರೆ. ರೈತರು, ದಲಿತರು, ಮಹಿಳೆಯರ ಸಮಸ್ಯೆಗೆ ಪರಿಹಾ ಕೊಡಲಿಲ್ಲ. ಅನ್ನಭಾಗ್ಯ ಯೋಜನೆಗೆ ಅಕ್ಕಿಯನ್ನೂ ಕೊಟ್ಟಿಲ್ಲ. ಬಡವರ ಸಂಕಷ್ಟಕ್ಕೆ ಸ್ಪಂದಿಸಿಲ್ಲ. ಕರ್ನಾಟಕ್ಕೆ ಖಾಲಿ ಚೊಂಬು ಕೊಟ್ಟಿದ್ದೇ ಪ್ರಧಾನಿ ಮೋದಿ ಸಾಧನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳುತ್ತಿದ್ದಾರೆ ಮನಮೋಹನ್ ಸಿಂಗ್ ಅವರು ದೇಶಕ್ಕೆ ಚೊಂಬು ಕೊಟ್ಟು ಹೋಗಿದ್ದರು, ಮೋದಿ ಪ್ರಧಾನಿಯಾದ ಬಳಿಕ ಅದನ್ನು ಅಕ್ಷಯ ಪಾತ್ರೆ ಮಾಡಿ ಬಡವರಿಗೆ ಕೊಟ್ಟಿದ್ದಾರೆ ಎಂದು. ದೇವೇಗೌಡರ ಹೇಳಿಕೆ ಬರಿ ಸುಳ್ಳು. ಮೋದಿ ಪ್ರಧಾನಿ ಆದ ಬಳಿಕ 124 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ದೇವೇಗೌಡರೇ ಮೋದಿ ಹೊಗಳಬೇಕು ಎಂದು ಸುಳ್ಳು ಹೇಳುವುದು ಸರಿಯೇ? ಎಂದು ಪ್ರಶ್ನಿಸಿದ್ದಾರೆ.
ದೇಶದ ಜನರಿಗೆ 124 ಲಕ್ಷ ಕೋಟಿ ಸಾಲ ನೀಡಿದ್ದಾರಲ್ಲ ಇದನ್ನು ಅಕ್ಷಯ ಪಾತ್ರೆ ಎಂದು ಕರೆಯಬೇಕೆ? ಮಾಜಿ ಪ್ರಧಾನಿಯಾಗಿ ಈ ರೀತಿ ಸುಳ್ಳು ಹೇಳುತ್ತಿರುವುದು ಸರಿಯೇ? ದೇವೇಗೌಡರೇ ಈ ಬಗ್ಗೆ ಉತ್ತರ ಕೊಡಿ. ಪ್ರಧಾನಿ ಮೋದಿ, ಮಾಜಿ ಪ್ರಧಾನಿ ದೇವೇಗೌಡರು ಇಬ್ಬರೂ ಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.