ಚಿಕ್ಕಬಳ್ಳಾಪುರ: ನಾನು ಏನು ಬೇಕಾದರೂ ತಿಂದು ಎಲ್ಲಿಗೆ ಬೇಕಾದರೂ ಹೋಗುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ನಾನು ಏನು ತಿನ್ನಬೇಕು ಏನು ತಿನ್ನಬಾರದು ಎಂದು ಕೇಳಲು ಅವರು ಯಾರು? ನಾನು ಮಾಂಸಾಹಾರಿ, ಮಾಂಸಾಹಾರ ಸೇವಿಸುತ್ತೇನೆ. ನಿಮ್ಮ ಹವ್ಯಾಸ ನಿಮಗೆ ನಮ್ಮ ಹವ್ಯಾಸ ನಮಗೆ. ಅದನ್ನು ಕೇಳೋಕೆ ಬಿಜೆಪಿಯವರು ಯಾರು ಎಂದು ಪ್ರಶ್ನಿಸಿದ್ದಾರೆ.
ನಾನು ಊಟ ಮಾಡಿದ್ದು ಸುದರ್ಶನ ಅತಿಥಿ ಗೃಹದಲ್ಲಿ. ಸಂಜೆ ದೇವಾಲಯಕ್ಕೆ ಹೋಗಿದ್ದೆ. ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ. ಅವರದು ಬೆಂಕಿ ಹಾಕುವ ಕೆಲಸ ಎಂದು ಟೀಕಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಿಸಲು ಎಂದು ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆ ನೀಡಿದ್ದಾರೆ. ಸಂಸದ ಹೆಗಡೆ ವಿರುದ್ಧ ಬಿಜೆಪಿ ಯಾವುದೇ ಕ್ರಮ ಕೈಗೊಂಡಿಲ್ಲ. ಅಮಿತ್ ಶಾ ಹೇಳಿಕೆ ನೀಡಿದಾಗಲೂ ಕ್ರಮ ಕೈಗೊಂಡಿಲ್ಲ. ರಾಷ್ಟ್ರಧ್ವಜದ ಬಗ್ಗೆಯೂ ಬಿಜೆಪಿಯವರಿಗೆ ಗೌರವ ಇಲ್ಲ ಎಂದು ಟೀಕಿಸಿದ್ದಾರೆ.
ಮಾಂಸಾಹಾರ ಸೇವಿಸಿ ಸಿದ್ಧರಾಮಯ್ಯ ದೇವಾಲಯಕ್ಕೆ ಭೇಟಿ ನೀಡಿರಲಿಲ್ಲ. ಅಕ್ಕಿರೊಟ್ಟಿ, ಪಲ್ಯ ಊಟ ಮಾಡಿದರು. ಮಾಂಸಹಾರ ಸೇವಿಸಿರಲಿಲ್ಲ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಹೇಳಿದ್ದಾರೆ.