ಬೆಂಗಳೂರು: ಬಿಜೆಪಿ -ಜೆಡಿಎಸ್ ಪಕ್ಷ ಯಾತ್ರೆಗೆ ಪ್ರತಿಯಾಗಿ ಆಡಳಿತಾರೂಢ ಕಾಂಗ್ರೆಸ್ ಆಯೋಜಿಸಿರುವ ಜನಾಂದೋಲನ ಬೃಹತ್ ಸಮಾವೇಶ ಶುಕ್ರವಾರ ಮೈಸೂರಿನಲ್ಲಿ ನಡೆಯದೆ.
ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗ ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಪ್ರಯುಕ್ತ ದಾವಣಗೆರೆಯಲ್ಲಿ ‘ಸಿದ್ದರಾಮಯ್ಯ-75’, ‘ಸಿದ್ಧರಾಮೋತ್ಸವ’ ಹೆಸರಲ್ಲಿ ಸಮಾವೇಶ ನಡೆಸಲಾಗಿತ್ತು. ಆ ಸಭೆಗೆ ರಾಜ್ಯದ ಮೂಲೆ ಮೂಲೆಗಳಿಂದ ಜನಸಾಗರವೇ ಹರಿದು ಬಂದಿತ್ತು. ಅದೇ ಮಾದರಿಯಲ್ಲಿ ಇಂದು ಮೈಸೂರಿನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ -ಜೆಡಿಎಸ್ ಪಾದಯಾತ್ರೆ ಕೈಗೊಂಡಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ ವಿರುದ್ಧ ಕೇಳಿ ಬಂದ ಮುಡಾ ಹಗರಣ ವಿಚಾರ ಮುಂದಿಟ್ಟುಕೊಂಡು ಪಾದಯಾತ್ರೆ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಜನಾಂದೋಲನ ಹೆಸರಿನಲ್ಲಿ ಮೈಸೂರು -ಬೆಂಗಳೂರು ರಸ್ತೆಯ ಪ್ರಮುಖ ಪಟ್ಟಣಗಳಲ್ಲಿ ದೋಸ್ತಿ ಪಕ್ಷಗಳ ವಿರುದ್ಧ ಹೋರಾಟ ನಡೆಸಲಿದೆ. ಇದರ ಸಮಾರೋಪ ಸಮಾರಂಭ ಇಂದು ಮೈಸೂರಿನಲ್ಲಿ ನಡೆಯಲಿದ್ದು, ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್ ಅಖಾಡ ಸಜ್ಜುಗೊಳಿಸಿದೆ.
ಬಿಜೆಪಿ ಪಾದಯಾತ್ರೆ ಮೈಸೂರು ತಲುಪುವ ಒಂದು ದಿನ ಮೊದಲೇ ಜನಾಂದೋಲನ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ಸಿದ್ದರಾಮಯ್ಯ ಕೂಡ ತಯಾರಿ ಮಾಡಿಕೊಂಡಿದ್ದಾರೆ. ಪ್ರತಿಪಕ್ಷಗಳ ವಿರುದ್ಧದ ಹಗರಣಗಳ ದಾಖಲೆ ಬಿಡುಗಡೆ ಮಾಡುವ ಸಾಧ್ಯತೆ ಇದೆ.