
ಬೆಂಗಳೂರು: ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪತ್ನಿ ಪಾರ್ವತಿಗೆ ಲೋಕಾಯುಕ್ತ ಕ್ಲೀನ್ ಚಿಟ್ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇದರಲ್ಲಿ ಅಚ್ಚರಿಯೇನಿಲ್ಲ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಸಿಎಂ ಸಿದ್ದರಾಮಯ್ಯ ಕುಟುಂಬದವರು ರಾತ್ರಿ 8 ಗಂಟೆಗೆ ಮೈಸೂರಿನಲ್ಲಿ ಲೋಕಾಯುಕ್ತ ಕಚೇರಿಗೆ ಹೋಗಿ ಬರುತ್ತಿದ್ದರು. ಮಾವನ ಮನೆಗೆ ಹೋದಂತೆ ಸಿದ್ದರಾಮಯ್ಯ ಕುಟುಂಬದವರು ಲೋಕಾಯುಕ್ತ ಕಚೇರಿಗೆ ಹೋಗಿ ಬರುತ್ತಿದ್ದರು. ಹೀಗಿರುವಾಗ ಈಗ ಕ್ಲೀನ್ ಚಿಟ್ ನೀಡಿರುವುದರಲ್ಲಿ ಆಶ್ಚರ್ಯವೇನಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯನವರು ಮೊದಲು ತಾವು ಮೂಡಾ ಹಗರಣದಲ್ಲಿ ಭಾಗಿಯಾಗಿಲ್ಲ. ಇದು ಸುಳ್ಳು ಆರೋಪ ಎಂದರು. ಬಳಿಕ 14 ನಿವೇಶನಗಳನ್ನು ವಾಪಾಸ್ ನೀಡಿದರು. ಅಕ್ರಮ ನಡೆಸಿಲ್ಲ ಎಂದರೆ ನಿವೇಶನಗಳನ್ನು ಹಿಂದಿರುಗಿಸಿದ್ದು ಯಾಕೆ? ಇದನ್ನು ಲೋಕಾಯುಕ್ತಕ್ಕೂ ಪ್ರಶ್ನೆ ಮಾಡಬೇಕು. ಸಿದ್ದರಾಮಯ್ಯನವರಿಗೆ ಲೋಕಾಯುಕ್ತ ನೀಡಿರುವುದು ಫೇಕ್ ಕ್ಲೀನ್ ಚಿಟ್ ಎಂದು ವಾಗ್ದಾಳಿ ನಡೆಸಿದರು.