
ಮೈಸೂರು: ನನ್ನ ವಿರುದ್ಧ ರಾಜಕೀಯ ಪ್ರೇರಿತ ಕೇಸ್ ಹಾಕಿರುವುದು ಇದೇ ಮೊದಲು. ರಾಜ್ಯಪಾಲರು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ದೇಶದಲ್ಲಿ ಎಲ್ಲೆಲ್ಲಿ ವಿರೋಧಪಕ್ಷಗಳ ಸರ್ಕಾರವಿದೆಯೋ, ಅಲ್ಲಿ ಕೇಂದ್ರ ಸರ್ಕಾರ ಇಡಿ, ಸಿಬಿಐ ಹಾಗೂ ರಾಜಭವನದ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.
ರಾಷ್ಟ್ರಪತಿಗಳಾಗಲಿ ಅಥವಾ ರಾಜ್ಯಪಾಲರಾಗಲಿ ಸಂವಿಧಾನದ ಪ್ರಕಾರ ಕೆಲಸ ಮಾಡಲು ನಾಮಾಂಕಿತರಾಗಿದ್ದು, ಯಾವುದು ಚುನಾವಣೆಯ ಮೂಲಕ ಆಯ್ಕೆಯಾದವರಲ್ಲ. ಅವರು ಸಂವಿಧಾನದಲ್ಲಿ ಪ್ರಮುಖರು. ಆದರೆ ಜನಪ್ರತಿನಿಧಿಗಳು ಚುನಾವಣೆಯ ಮೂಲಕ ಆಯ್ಕೆಯಾಗಿ ಆಡಳಿತದಲ್ಲಿ ಪ್ರಮುಖರು. ಇಂತಹ ಪ್ರಮುಖ ವ್ಯತ್ಯಾಸವಿರುವಾಗ ಯಾವುದೇ ರಾಜ್ಯದ ರಾಜ್ಯಪಾಲರು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದರು.
ಮುಡಾ ಪ್ರಕರಣದಲ್ಲಿ ಕಾನೂನು ಪ್ರಕಾರ ಹೋರಾಟ ಮಾಡಲಾಗುವುದು. ನನ್ನ ಮೇಲಿನ ಜನಬೆಂಬಲದಿಂದ ಬೆದರಿರುವ ಪ್ರತಿಪಕ್ಷಗಳು, ನನ್ನ ಮೇಲೆ ರಾಜಕೀಯ ಪ್ರೇರಿತ ಕೇಸ್ ಹಾಕಿರುವುದು ಇದೇ ಮೊದಲು ಎಂದರು.