ಬೆಂಗಳೂರು: ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ನಡೆಯಲಿದ್ದ ವಿಧಾನಮಂಡಲ ಕಲಾವನ್ನು ಬುಧವಾರಕ್ಕೆ ಮುದೂಡಲಾಗಿದೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಅಗಲಿದ ಶಾಸಕ ರಾಜಾ ವೆಂಕಟಪ್ಪ ನಾಯಕ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ, ರಾಜಾ ವೆಂಕಟಪ್ಪ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.
ಸುರಪುರ ಕ್ಷೇತ್ರದಿಂದ ನಾಲ್ಕು ಬಾರಿ ಆಯ್ಕೆಯಾಗಿದ್ದರು. ಸದಾ ಹಸನ್ಮುಖಿ, ಬಹಳ ಸಂಬಾವಿತ ವ್ಯಕ್ತಿ. ಹೃದಯಾಘಾತದಿಂದ ಮೃತಪಟ್ಟಿದ್ದು, ದು:ಖ ತಂದಿದೆ ಎಂದು ಕಂಬನಿ ಮಿಡಿದರು.
ಇದೇ ವೇಳೆ ರಾಜಾ ವೆಂಕಟಪ್ಪ ನಾಯಕ್ ಹಾಲಿ ಶಾಸಕರಾಗಿದ್ದರಿಂದ ಸದನದ ಕಲಾಪಗಳನ್ನು ನಡೆಸುವಂತಿಲ್ಲ. ಹಾಗಾಗಿ ನಾಳೆ ವಿಧಾನಮಂಡಲದ ಕಲಾಪ ನಡೆಯಲ್ಲ. ನಾಳಿನ ಕಲಾಪವನ್ನು ಬುಧವಾರ ನಡೆಸಲಾಗುವುದು ಎಂದರು. ಕಾರಣ ನಾಡಿದ್ದು ರಾಜ್ಯಸಭಾ ಚುನಾವಣೆ ಇರುವುದರಿಂದ ನಾಡಿದ್ದು ಕಲಾಪ ನಡೆಸಲು ಸಾಧ್ಯವಿಲ್ಲ ಹಾಗಾಗಿ ನಾಳಿನ ಕಲಾಪವನ್ನು ಬುಧಾವರಕ್ಕೆ ಮುಂದೂಡಲಾಗುವುದು ಎಂದು ತಿಳಿಸಿದರು.