ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 28 ಸ್ಥಾನಗಳನ್ನೂ ಗೆಲ್ಲಲು ಸಾಧ್ಯವೇ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮಂಡ್ಯದ ಮಳವಳ್ಳಿಯಲ್ಲಿ ನಡೆದ ಗ್ಯಾರಂಟಿ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾವು ಲೋಕಸಭಾ ಚುನವಣೆಯಲ್ಲಿ 20 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತೇವೆ. ಬಿಜೆಪಿ ರಾಜ್ಯದ 28 ಸ್ಥಾನಗಳನ್ನು ಗೆಲ್ಲಲು ಸಾಧ್ಯವಿದೆಯೇ? ಎಂದು ಕೇಳಿದ್ದಾರೆ.
ರಾಜ್ಯದ ಜನತೆ ಉಪಕಾರ ಮಾಡಿದವರನ್ನು ಮರೆಯಲ್ಲ. ಬಡ ಜನರಿಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಉಪಕಾರ ಮಾಡಿದವರನ್ನು ಮರೆಯುತ್ತೀರಾ? ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ಭರವಸೆಗಳನ್ನು ಈಡೇರಿಸಿದೆ ಎಂದು ಹೇಳಿದ್ದಾರೆ.
ಹೆಚ್.ಡಿ.ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿಯವರು ಇಂತಹ ಯೋಜನೆಗಳನ್ನು ಜಾರಿ ಮಾಡಿದ್ದರಾ? ಅನ್ನಭಾಗ್ಯ ಯೋಜನೆ ನೀಡಿದ್ದು ಕಾಂಗ್ರೆಸ್ ಸರ್ಕಾರ. ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದೆವು. ಆದರೆ ಕೇಂದ್ರ ಸರ್ಕಾರ ಆರಂಭದಲ್ಲಿ ಅಕ್ಕಿ ಕೊಡುತ್ತೇವೆ ಎಂದು ಹೇಳಿ ಬಳಿಕ ನಮ್ಮ ಬೇಡಿಕೆ ತಿರಸ್ಕರಿಸಿತು. ಹಾಗಾಗಿ 5 ಕೆಜಿ ಅಕ್ಕಿ ಉಳಿದ 5 ಕೆಜಿಗೆ ಹಣ ನೀಡುತ್ತಿದ್ದೇವೆ. ಬಡವರಿಗೆ ಅಕ್ಕಿ ಕೊಡದ ಬಿಜೆಪಿಗೆ ಮತ ಹಾಕುತ್ತೀರಾ? ಎಂದು ಪ್ರಶ್ನಿಸಿದ್ದಾರೆ.
ನಾವು ಬಿಜೆಪಿ, ಜೆಡಿಎಸ್ ನಂತೆ ಕೇವಲ ಭರವಸೆ ಕೊಟ್ಟು ಮಾತಿಗೆ ತಪ್ಪಲ್ಲ. ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ 5 ಗ್ಯಾರಟಿ ಯೋಜನೆ ಜಾರಿಗೆ ತ<ದಿದ್ದೇವೆ. 155 ಕೋಟಿ ಜನರು ಈವರೆಗೆ ಬಸ್ ನಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ ಎಂದರು.