ರಾಜ್ಯ ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡ ಬೆನ್ನಲ್ಲೇ ಇದೀಗ ರಾಜ್ಯ ಕಾಂಗ್ರೆಸ್ನಲ್ಲಿಯೂ ಬೇಗುದಿಯ ಹೊಗೆಯಾಡುತ್ತಿರೋದು ಗಮನಕ್ಕೆ ಬಂದಿದೆ. ನಾಯಕತ್ವದ ವಿಚಾರವಾಗಿ ಕಾಂಗ್ರೆಸ್ನಲ್ಲಿ ಸಿದ್ದು v/s ಡಿಕೆಶಿ ಬಣ ನಿರ್ಮಾಣವಾದಂತೆ ಕಾಣುತ್ತಿದ್ದು ಈ ಬಗ್ಗೆ ಸ್ವತಃ ಸಿದ್ದರಾಮಯ್ಯ ಬಳ್ಳಾರಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಈ ವಿಚಾರವಾಗಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ , ನಾನು ಸಿಎಂ ಆಗಬೇಕು ಅಂತಾ ಅನೇಕ ಶಾಸಕರು ಹೇಳುತ್ತಿದ್ದಾರೆ. ಇದು ಅವರ ವೈಯಕ್ತಿಕ ಅಭಿಪ್ರಾಯವೇ ಹೊರತು ಈ ಬಗ್ಗೆ ಇನ್ನೂ ಯಾರೂ ತೀರ್ಮಾನ ಮಾಡಿಲ್ಲ.
ಪ್ರಜಾಪ್ರಭುತ್ವದಲ್ಲಿ ಯಾರು ಬೇಕಿದ್ದರೂ ಅವರ ಅಭಿಪ್ರಾಯಗಳನ್ನ ಹೊರಹಾಕಬಹುದು. ಚುನಾವಣೆ ಆಗಬೇಕು. ಪಕ್ಷ ಗೆಲ್ಲಬೇಕು. ಇದಾದ ಬಳಿಕೆ ನಾಯಕನನ್ನ ಆಯ್ಕೆ ಮಾಡುವ ಪ್ರಕ್ರಿಯೆ ಆರಂಭವಾಗುತ್ತೆ. ರಾಜ್ಯದ ಜನತೆ ಹಾಗೂ ಕೆಲ ಶಾಸಕರು ನಾನು ಸಿಎಂ ಆಗಬೇಕು ಎಂದು ಹೇಳಿದ್ದಿರಬಹುದು. ಆದರೆ ನಾನೇನು ಅವರ ಬಳಿ ಹೋಗಿ ಈ ರೀತಿ ಹೇಳಿ ಎಂದು ಹೇಳಿಲ್ಲ. ಪಕ್ಷದ ವೇದಿಕೆಯಲ್ಲಿ ಈ ರೀತಿಯ ಯಾವುದೇ ಚರ್ಚೆ ಇಲ್ಲಿಯವರೆಗೆ ನಡೆದೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.