ಕಲಬುರಗಿ: ಕೋಲಾರದಿಂದ ಸ್ಪರ್ಧಿಸುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದು, ಅವರಿಗೆ ಇದು ಕೊನೆಯ ಚುನಾವಣೆ. ಆಮೇಲೆ ಕೋಲಾರಕ್ಕೂ ಸಿದ್ದರಾಮಯ್ಯ ಬೈಬೈ ಹೇಳಿ ಹೋಗ್ತಾರೆ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಕಲಬುರ್ಗಿ ಜಿಲ್ಲೆ ಆಳಂದ ತಾಲೂಕಿನ ಹಿರೋಳಿ ಗ್ರಾಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಇದ್ದಾಗ 5 ವರ್ಷ ಅಭಿವೃದ್ಧಿ ಏನೂ ಮಾಡಲಿಲ್ಲ. ಈಗಲಾದರೂ ಸಿದ್ದರಾಮಯ್ಯ ಅಭಿವೃದ್ಧಿ ಮಾಡ್ತೀನಿ ಅಂತ ಹೇಳಿದ್ದಾರಾ? ನೀರಾವರಿ ಯೋಜನೆಗೆ 5 ಲಕ್ಷ ಕೋಟಿ ರೂ. ನೀಡುವೆ ಎಂದು ಹೇಳುತ್ತಾರೆ. ಐದು ವರ್ಷ ಅಧಿಕಾರದಲ್ಲಿದ್ದಾಗ ಏನು ಮಾಡಿದ್ರು? ನೀರೇ ಕೊಡದವರು ಮಜ್ಜಿಗೆ ಕೊಡ್ತಾರಾ? ಎಂದು ಪ್ರಶ್ನಿಸಿದ್ದಾರೆ.
ಕೋಲಾರದಲ್ಲಿ ಜನರ ಆಶೀರ್ವಾದದಿಂದ ಜೆಡಿಎಸ್ ಅಭ್ಯರ್ಥಿ ಗೆಲ್ಲುತ್ತಾರೆ. ನಮ್ಮ ಅಭ್ಯರ್ಥಿ ಗೆಲ್ಲುವ ಬಗ್ಗೆ ಸಂಪೂರ್ಣ ವಿಶ್ವಾಸ ಇದೆ. ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿಯೂ ಜೆಡಿಎಸ್ ಅಭ್ಯರ್ಥಿ ಸ್ಪರ್ಧಿಸುತ್ತಾರೆ. ರಾಜ್ಯದಲ್ಲಿ 123 ಸ್ಥಾನ ಗೆಲ್ಲುವ ಗುರಿ ಕೋಲಾರದಿಂದಲೇ ಆರಂಭಿಸುತ್ತೇವೆ. ಹಿತೈಷಿಗಳ ಜೊತೆ ಸಮಾಲೋಚನೆ ನಡೆಸಿ ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ರಾಮನಗರದಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸಂಪೂರ್ಣ ಬೆಂಬಲ ಇದೆ. ಮೂರೂವರೆ ವರ್ಷದಿಂದ ಕಟ್ಟದವರು ಚುನಾವಣೆ ವೇಳೆ ಮಂದಿರ ಕಟ್ಟಲು ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಅಂಬೆವಾಡಿ ಗ್ರಾಮದಲ್ಲಿ ಹೇಳಿದ್ದಾರೆ.