ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮಂಡಿಸಿರುವ ರಾಜ್ಯ ಬಜೆಟ್ ಬಗ್ಗೆ ವಿಪಕ್ಷ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಇದೊಂದು ಕಳಪೆ ಬಜೆಟ್ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಅತ್ಯಂತ ಕಳಪೆ ಬಜೆಟ್ ಮಂಡಿಸಿದ್ದಾರೆ. ನನ್ನ ಜೀವಮಾನದಲ್ಲಿಯೇ ಇಷ್ಟು ಕಳಪೆ ಬಜೆಟ್ ನೋಡಿರಲಿಲ್ಲ. 14 ಬಜೆಟ್ ಗಳನ್ನು ಮಂಡಿಸಿದ್ದ ಸಿದ್ದರಾಮಯ್ಯ ಅವರಿಂದ ಇಂತಹ ಕಳಪೆ ಬಜೆಟ್ ನಿರೀಕ್ಷೆ ಮಾಡಿರಲಿಲ್ಲ ಎಂದಿದ್ದಾರೆ.
ಬಜೆಟ್ ನ ಬಹುತೇಕ ಅಂಶಗಳನ್ನು ಕೇಂದ್ರ ಸರ್ಕಾರವನ್ನು ದೂರಲು ಇಡಲಾಗಿದೆ. ದೆಹಲಿ ಪ್ರತಿಭಟನೆಯ ಮುಂದುವರೆದ ಭಾಗದ ಆಯವ್ಯಯವನ್ನಾಗಿ ಮಾಡಲಾಗಿದೆ. ವಾಸ್ತವಿಕ ಅಂಕಿ ಅಂಶಗಳನ್ನು ನೀಡದೇ ಕಾಲ್ಪನಿಕ ಅಂಕಿ ಅಂಶಗಳನ್ನು ನೀಡಿ ರಾಜ್ಯದ ಜನತೆಗೆ ಮಾಡಿದ ಮೋಸದಂತಿದೆ ಎಂದು ಕಿಡಿಕಾರಿದ್ದಾರೆ.
ಇನ್ನು ಬಜೆಟ್ ನಲ್ಲಿ ಜಲಸಂಪನ್ಮೂಲಕ್ಕೆ ಯಾವುದೇ ಅನುದಾನ ನೀಡಿಲ್ಲ. ಈ ಮೂಲಕ ಡಿ.ಕೆ.ಶಿವಕುಮಾರ್ ಅವರಿಗೂ ಮೋಸ ಮಾಡಿದ್ದಾರೆ. ಮೇಕೆದಾಟು ಪಾದಯಾತ್ರೆ ಮಾಡಿದ್ದೇ ಅವರ ಸಾಧನೆಯಾಗಿದೆ. ಕೃಷ್ಣ, ಮಹದಾಯಿ, ನವಿಲೆ ಯೋಜನೆಗೆ ಅನುದಾನ ನಿಗದಿ ಮಾಡಿಲ್ಲ. 7ನೇ ವೇತನ ಆಯೋಗದ ಅನುಷ್ಠನದ ಬಗ್ಗೆಯೂ ಸ್ಪಷ್ಟ ಘೋಷಣೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.