ಬೆಂಗಳೂರು: ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಆಡಳಿತ ಭಾಷೆ ಕನ್ನಡ. ವ್ಯವಹಾರವೂ ಕನ್ನಡದಲ್ಲಿಯೇ ಇರಬೇಕು. ಈ ವಿಚಾರವಾಗಿ ರಾಜಿ ಪ್ರಶ್ನೆಯೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕನ್ನಡ ಕಡ್ಡಾಯ ವಿಚಾರವಾಗಿ ನಡೆದ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾಮಫಲಕಗಳು, ಜಾಹೀರಾತುಗಳಲ್ಲಿಯೂ ಶೆ.60ರಷ್ಟು ಕನ್ನಡವೇ ಇರಬೇಕು. ಶೇ.40ರಷ್ಟು ಮಾತ್ರ ಬೇರೆ ಭಾಷೆಗೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಶೀಘ್ರದಲ್ಲೇ ನಿಯಮ ಜಾರಿಗೆ ತರಲಾಗುವುದು ಎಂದರು.
ಈ ಹಿಂದೆಯೂ ಕರ್ನಾಟಕದಲ್ಲಿ ಕನ್ನಡ ಕಡ್ಡಾಯ ಎಂದು ಸೂಚಿಸಲಾಗಿತ್ತು. ಆದರೂ ನಾಮಫಲಕಗಳ ಬಗ್ಗೆ ಕಟ್ಟುನಿಟ್ಟಾಗಿ ನಿಯಮ ಜಾರಿಯಾಗಿರಲಿಲ್ಲ. ಹಿಂದೆ ಶೇ.50ರಷ್ಟು ಕನ್ನಡ ಭಾಷೆಗೆ ಆದ್ಯತೆ ಎಂದು ಸುತ್ತೋಲೆ ಇತ್ತು. ಈಗ ಸುತ್ತೋಲೆ ತಿದ್ದುಪಡಿ ಮಾಡಲು ನಿರ್ಧರಿಸಿದ್ದು, ಶೇ.60ರಷ್ಟು ಕನ್ನಡ ಭಾಷೆ ಕಡ್ಡಾಯವಾಗಿ ಇರಬೇಕು. ಈ ನಿಯಮ ರಾಜ್ಯಾದ್ಯಂತ ಅನ್ವಯವಾಗಲಿದೆ. ನಾಮಫಲಕಗಳು, ಜಾಹಿರಾತುಗಳು ಎಲ್ಲದರಲ್ಲಿಯೂ ಕನ್ನಡ ಕಡ್ಡಾಯ. ಬೋರ್ಡ್ ಚೇಂಜ್ ಮಾಡಲು ಕಾಲಾವಕಾಶ ನೀಡಲಾಗಿದೆ. 2024ರ ಫೆಬ್ರವರಿ 28ರೊಳಗಾಗಿ ಬೋರ್ಡ್ ಗಳನ್ನು ಬದಲಿಸಿ ಕನ್ನಡ ಬೋರ್ಡ್ ಹಾಕಬೇಕು. ನಿಯಮ ಮೀರಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.