ಮೈಸೂರು: ಮುಡಾ ಹಗರಣದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಕಿಡಿಕಾರಿರುವ ಸಿದ್ದರಾಮಯ್ಯ, ಎಷ್ಟೇ ಪಾದಯಾತ್ರೆ ಮಾಡಿದರೂ ಜಗ್ಗಲ್ಲ ಎಂದು ತಿರುಗೇಟು ನೀಡಿದ್ದಾರೆ.
ಮೈಸೂರಿನ ಮಹಾರಾಜಾ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನಾಗಲಿ, ನನ್ನ ಪತ್ನಿಯಾಗಲಿ ಯಾವುದೇ ತಪ್ಪು ಮಾಡಿಲ್ಲ. ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಅನಗತ್ಯವಾಗಿ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ನವರು ಎಷ್ಟೇ ಪಾದಯಾತ್ರೆ ಮಾಡಲಿ ನಾನು ಜಗ್ಗಲ್ಲ. ಜನರ ಆಶಿರ್ವಾದವಿರುವವರೆಗೂ ನನ್ನನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
1983ರಲ್ಲಿ ಚುನಾವಣೆಗೆ ಡೆಪಾಸಿಟ್ ಮಾಡಲು ನನ್ನ ಬಳಿ 250 ರೂಪಾಯಿ ಕೂಡ ಇರಲಿಲ್ಲ. ಚುನಾವಣೆಗೆ ಜನರೇ ದುಡ್ಡು ಖರ್ಚು ಮಾಡಿ ನನ್ನನ್ನು ನಿಲ್ಲಿಸಿ ಗೆಲ್ಲಿಸಿದರು. ನನ್ನ 9 ಚುನಾವಣೆಗಳನ್ನು ಜನರೇ ಗೆಲ್ಲಿಸಿದ್ದಾರೆ. ಬಡವರು, ಹಿಂದುಳಿದವರ ನ್ಯಾಯಕ್ಕಾಗಿ ಹೋರಾಡುತ್ತಿದ್ದೇನೆ ಎಂದು ಹೇಳಿದರು.
ಶ್ರೀಗಂಧ ಕಾವಲು ಪ್ರಕರಣದಲ್ಲಿ ಜಾಮೀನಿನ ಮೇಲೆ ಅಶೋಕ್ ಹೊರಗಿದ್ದಾರೆ. ಯಡಿಯೂರಪ್ಪನವರ ತರಹ ನಾನೇನೂ ಡಿನೋಟಿಫೈ ಮಾಡಿದ್ದೇನಾ? ವಿಜಯೇಂದ್ರ ಕೋಲ್ಕತ್ತಾದ ಶೆಲ್ ಕಂಪನಿಯಿಂದ ದುಡ್ಡು ಹೊಡೆದಿಲ್ವಾ? ನಾನು 12-13 ವರ್ಷಗಳ ಕಾಲ ಹಣಕಾಸು ಮಂತ್ರಿಯಾಗಿದ್ದೆ. ನನಗೆ ಆಸ್ತಿ ವ್ಯಾಮೋಹವಿದ್ದರೆ ಕೋಟ್ಯಂತರ ಹಣ ಮಾಡಬಹುದಿತ್ತು. ಮೊನ್ನೆ ಮೊನ್ನೆವರೆಗೂ ನನಗೆ ಮೈಸೂರಿನಲ್ಲಿ ಸ್ವಂತ ಮನೆ ಇರಲಿಲ್ಲ. ಸಾಲ ಮಾಡಿ ಕಟ್ಟಿದ್ದ ಎರಡು ಮನೆಗಳನ್ನು ಮಾರಾಟ ಮಾಡಿದ್ದೇನೆ ಎಂದರು.
ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ನಡೆದಿದೆ. ಆದರೆ ಅದರಲ್ಲಿ ನನ್ನ ಪಾತ್ರವಿಲ್ಲ. ವಾಲ್ಮೀಕಿ ನಿಗಮದ ಹಗರಣದಲ್ಲಿ ನನ್ನ ಪಾತ್ರವಿಲ್ಲ ಎಂದು ಗೊತ್ತಾದ ಬಳಿಕ ಈಗ ಮುಡಾದಲ್ಲಿ ಹಗರಣವಾಗಿದೆ ಎಂದು ಆರೋಪಿಸುತ್ತಿದ್ದಾರೆ. ಮುಡಾದಲ್ಲಿಯೂ ನಾನು ಭ್ರಷ್ಟಾಚಾರ ಮಾಡಿಲ್ಲ. ನನ್ನ ಪಾತ್ರವೂ ಇಲ್ಲ. ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಕುಮಾರಸ್ವಾಮಿಯವರಿಗೆ ನನ್ನ ರಾಜೀನಾಮೆ ಕೇಳಲು ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ವಿರುದ್ಧ 82ನೇ ವಯಸ್ಸಿನಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ. ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ 20 ಹಗರಣಗಳನ್ನು ಮಾಡಿದ್ದಾರೆ. ವಿಜಯೇಂದ್ರ ಕೂಡ ಅನೇಕ ಹಗರಣಗಲಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಬಿಜೆಪಿ ಶಾಸಕರೇ ಆಗಿರುವ ಯತ್ನಾಳ್ ಕೂಡ ಹೇಳುತ್ತಿದ್ದಾರೆ. ಮುಡಾದಲ್ಲಿ ಭ್ರಷ್ಟಾಚಾರವಾಗಿದೆ ಎಂದು ಆರೋಪಿಸುತ್ತಾ ವಿಪಕ್ಷಗಳು ರಾಜಭವನವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.