ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಹೈಕೋರ್ಟ್ ಏಕಸದಸ್ಯ ಪೀಠ ತೀರ್ಪು ನೀಡಿದ್ದು, ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದೆ.
ಈ ಮೂಲಕ ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಹೈಕೋರ್ಟ್ ನ್ಯಾ. ನಾಗಪ್ರಸನ್ನ ಎತ್ತಿಹಿಡಿದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಹೈಕೋರ್ಟ್ ನಲ್ಲಿ ತೀವ್ರ ಹಿನ್ನಡೆಯಾಗಿದ್ದು, ಸಿಎಂ ಅರ್ಜಿ ವಜಾಗೊಳಿಸಿದ್ದು, ರಾಜ್ಯಪಾಲರ ಕ್ರಮ ಕಾನೂನುಬದ್ಧವಾಗಿದೆ ಎಂದು ಕೋರ್ಟ್ ತಿಳಿಸಿದೆ.
ಹೈಕೋರ್ಟ್ ನಲ್ಲಿ ತಮ್ಮ ಅರ್ಜಿ ವಜಾಗೊಂಡ ಸುದ್ದಿ ತಿಳಿಯುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ನಿರಾಶರಾಗಿದ್ದು, ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದ್ದಾರೆ. ಹೈಕೋರ್ಟ್ ತೀರ್ಪಿನ ಬಗ್ಗೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆಮೇಲೆ ಪ್ರತಿಕ್ರಿಯಿಸುತ್ತೇನೆ ಎಂದಷ್ಟೇ ಹೇಳಿ ತೆರಳಿದ್ದಾರೆ.
ಹೈಕೋರ್ಟ್ ನಲ್ಲಿ ತಮ್ಮ ವಿರುದ್ಧ ತೀರ್ಪು ಬರುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ, ಮುಂದಿನ ಕಾನೂನು ಪ್ರಕ್ರಿಯೆ ಬಗ್ಗೆ ಹಿರಿಯ ವಕೀಲ ಅಭಿಷೇಕ್ ಮನು ಸಿಂಘಿ ಹಾಗೂ ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿದ್ದಾರೆ.