ಬೆಂಗಳೂರು: ಕೊರೋನಾ ಸಂಕಷ್ಟ ಮತ್ತು ಸರ್ಕಾರದ ನೀತಿ ಮೊದಲಾದ ಕಾರಣಗಳಿಂದ ರೈತರಿಗೆ ಕೃಷಿ ಚಟುವಟಿಕೆ ಹಣವಿಲ್ಲದಂತಾಗಿದ್ದು, ಉಚಿತವಾಗಿ ರಸಗೊಬ್ಬರ ಮತ್ತು ಬಿತ್ತನೆ ಬೀಜ ನೀಡಬೇಕೆಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಈ ಕುರಿತಾಗಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಈ ಬಾರಿ ಕೇವಲ ಶೇಕಡ 19 ರಷ್ಟು ಅಂದರೆ 410 ಕ್ವಿಂಟಾಲ್ ಹೆಸರು ಕಾಳು ಬಿತ್ತನೆ ಬೀಜವನ್ನು ಮಾತ್ರ ರೈತ ಸಂಪರ್ಕ ಕೇಂದ್ರಗಳಿಗೆ ವಿತರಿಸಲಾಗಿದೆ. ಇದರಿಂದ ಅನ್ಯಾಯವಾಗುತ್ತದೆ. ಕಳೆದ ವರ್ಷಕ್ಕಿಂತ ಪೂರ್ವ ಮುಂಗಾರು ಹೆಚ್ಚಾಗಿದೆ. ಸರಾಸರಿಗಿಂತ ಮಳೆ ಹೆಚ್ಚಾಗಿದ್ದು, ಬಿತ್ತನೆ ಬೀಜ ಪೂರೈಕೆಯಾಗದೆ ತೊಂದರೆಯಾಗಿದೆ. ಬೇಡಿಕೆಯನ್ನು ಅಂದಾಜಿಸಿ ಸೂಕ್ತ ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಳ್ಳದೆ ಸಮಸ್ಯೆಯಾಗಿದೆ ಎಂದು ದೂರಿದ್ದಾರೆ.
ರೈತರಿಗೆ ಅಗತ್ಯವಿರುವ ಬೀಜ ಮತ್ತು ರಸಗೊಬ್ಬರಗಳನ್ನು ಉಚಿತವಾಗಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.