ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನನಗೆ ಈಗಾಗಲೇ ನಾಲ್ಕೈದು ಕ್ಷೇತ್ರದಿಂದ ನಿಲ್ಲಲು ಹೇಳುತ್ತಿದ್ದಾರೆ. ನಾನು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ಇನ್ನೂ ನಿರ್ಧರಿಸಿಲ್ಲ. ಇದರ ಬಗ್ಗೆ ಯೋಚನೆ ಮಾಡುತ್ತೇನೆ ಎಂದು ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.
ಜೆಡಿಎಸ್, ಬಿಜೆಪಿ ಹೊಂದಾಣಿಕೆ ರಾಜಕಾರಣ ಮಾಡುತ್ತಿವೆ ಎಂಬುದರ ಬಗ್ಗೆ ಮಾತನಾಡಿ, ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳಲಿ ಹೊಂದಾಣಿಕೆಯಾದರೂ ಮಾಡಿಕೊಳ್ಳಲಿ, ಮ್ಯಾಚ್ ಫಿಕ್ಸಿಂಗ್ ಏನಾದರೂ ಮಾಡಿಕೊಳ್ಳಲಿ, ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದೇ ನಮ್ಮ ಗುರಿ ಎಂದು ಹೇಳಿದ್ದಾರೆ.
ಸಿ.ಎಂ. ಇಬ್ರಾಹಿಂ ಪಕ್ಷವನ್ನು ಬಿಡುತ್ತಿರುವುದರಿಂದ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅವರಿಗೆ ಎಲ್ಲವನ್ನೂ ಕೊಟ್ಟಿದೆ. ಮನುಷ್ಯನಿಗೆ ಆಸೆ ಇರಬೇಕು ದುರಾಸೆ ಇರಬಾರದು, ಹಾಲಿ ಶಾಸಕ ಬಿ.ಕೆ. ಸಂಗಮೇಶ್ ಗೆ ಭದ್ರಾವತಿಯಲ್ಲಿ ಟಿಕೆಟ್ ತಪ್ಪಿಸಿ ಸಿ.ಎಂ. ಇಬ್ರಾಹಿಂ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿತ್ತು. ಅಲ್ಲಿಯೂ ಆತ ಸೋತ. ಅದಾದ ನಂತರ ಎಂಎಲ್ಸಿ ಮಾಡಲಾಗಿತ್ತು. ಆದರೂ ಪಕ್ಷ ಬಿಟ್ಟು ಹೋಗಿದ್ದಾನೆ ಎಂದರು.
ಜಿ.ಟಿ. ದೇವೇಗೌಡ ನನ್ನ ಜೊತೆ ಮಾತನಾಡಿದ್ದಾರೆ. ಅವರು ಮತ್ತು ಅವರ ಮಗನಿಗೆ ಕಾಂಗ್ರೆಸ್ ಟಿಕೆಟ್ ಕೇಳಿದ್ದಾರೆ. ನಾನು ಇನ್ನೂ ಹೈಕಮಾಂಡ್ ಜೊತೆ ಈ ವಿಚಾರ ಮಾತನಾಡಿಲ್ಲ
ಬಿಜೆಪಿಯಿಂದ ಕಾಂಗ್ರೆಸ್ ಗೆ ಎಷ್ಟು ಜನ ಬರುತ್ತಾರೆ ಎಂಬುದನ್ನು ಕಾದು ನೋಡಿ. ಕಾಂಗ್ರೆಸ್ ತೊರೆದು ಯಾರೂ ಬಿಜೆಪಿ ಸೇರುವುದಿಲ್ಲ. ನನ್ನ ಪ್ರಕಾರ ಅವಧಿಗೂ ಮುನ್ನ ಚುನಾವಣೆ ಬರುವುದಿಲ್ಲ. ಈ ಬಗ್ಗೆ ಬಿಜೆಪಿ ನಾಯಕರು ಕೂಡ ಹೇಳಿದ್ದಾರೆ. ಯಡಿಯೂರಪ್ಪ ಸಿಎಂ ಬೊಮ್ಮಾಯಿ ಸೇರಿ ಹಲವು ನಾಯಕರು ಈಗಾಗಲೇ ಅವಧಿಗೆ ಮೊದಲು ಚುನಾವಣೆ ಇಲ್ಲವೆಂದು ಹೇಳಿದ್ದಾರೆ. ಅವಧಿಗೂ ಮೊದಲೇ ಚುನಾವಣೆ ಬಂದರೆ ನಾವು ಸಿದ್ಧವಾಗಿದ್ದೇವೆ. ಜನರು ನಮ್ಮ ಪರವಾಗಿದ್ದಾರೆ ಎಂದರು.