ಬೆಂಗಳೂರು: ಶಾಸಕಾಂಗ ನಾಯಕನ ಆಯ್ಕೆಗಾಗಿ ಶಾಂಗ್ರಿಲಾ ಹೋಟೆಲ್ ನಲ್ಲಿ ಎಐಸಿಸಿ ವೀಕ್ಷಕರ ಸಮ್ಮುಖದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಎಐಸಿಸಿ ಅಧ್ಯಕ್ಷರ ನಿರ್ಧಾರಕ್ಕೆ ಬಿಡಲು ಸರ್ವಾನುಮತದಿಂದ ನಿರ್ಧಾರ ಕೈಗೊಳ್ಳಲಾಗಿದೆ.
ಶಾಸಕಾಂಗ ಸಭೆಯಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹಿಸಲು ಸಾಧ್ಯವಾಗದಂತೆ ಡಿ.ಕೆ. ಶಿವಕುಮಾರ್ ನೋಡಿಕೊಂಡಿದ್ದಾರೆ. ವೀಕ್ಷಕರ ಸಭೆಯಲ್ಲಿ ಶಾಸಕರ ಅಭಿಪ್ರಾಯ ವ್ಯಕ್ತವಾದರೆ ಸಿದ್ದರಾಮಯ್ಯ ಪರ ಹೆಚ್ಚಿನ ಶಾಸಕರು ಬ್ಯಾಟಿಂಗ್ ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಹಿಡಿದ ಪಟ್ಟು ಸಾಧಿಸಿದ್ದಾರೆ. ಶಾಸಕರ ಅಭಿಪ್ರಾಯಕ್ಕೆ ಅವಕಾಶ ಇಲ್ಲದಂತೆ ಮಾಡಿ ಹೈಕಮಾಂಡ್ ಅಂಗಳಕ್ಕೆ ಚೆಂಡು ರವಾನಿಸಿದ್ದಾರೆ ಎಂದು ಹೇಳಲಾಗಿದೆ.
ಸಿದ್ದರಾಮಯ್ಯ ಶಾಸಕರ ಅಭಿಪ್ರಾಯ ಸಂಗ್ರಹಕ್ಕೆ ಪಟ್ಟು ಹಿಡಿದಿದ್ದರೆ, ಸಿದ್ದರಾಮಯ್ಯ ನಿರ್ಧಾರಕ್ಕೆ ವಿರುದ್ಧವಾಗಿ ಡಿಕೆಶಿ ಹೈಕಮಾಂಡ್ ಮುಖ್ಯಮಂತ್ರಿ ಆಯ್ಕೆ ಮಾಡಲಿ ಎಂದು ಪಟ್ಟು ಹಿಡಿದಿದ್ದಾರೆ.
ಈ ನಡುವೆ ವೈಯಕ್ತಿಕ ಅಭಿಪ್ರಾಯ ಸಂಗ್ರಹಕ್ಕೆ ಕೆಲವು ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಅಭಿಪ್ರಾಯ ಸಂಗ್ರಹಿಸಲು ವೀಕ್ಷಕರು ಮುಂದಾಗಿದ್ದಾರೆ.
ಇದೀಗ ಮುಖ್ಯಮಂತ್ರಿ ಆಯ್ಕೆಯ ಜವಾಬ್ದಾರಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಗಲಿಗೆ ವಹಿಸಲಾಗಿದೆ.
ಇದಕ್ಕಿಂತ ಮೊದಲು ವೀಕ್ಷಕರು, ಉಸ್ತುವಾರಿ ಜೊತೆಗಿನ ಸಭೆಯಲ್ಲಿ ಸಿಎಂ ಅಧಿಕಾರಾವಧಿ ಹಂಚಿಕೆ ಸೂತ್ರಕ್ಕೆ ಡಿ.ಕೆ. ಶಿವಕುಮಾರ್ ಒಪ್ಪಿಲ್ಲ. ಶಾಸಕರ ಮತ ಸಂಗ್ರಹಕ್ಕೂ ಕೂಡ ಒಪ್ಪಿಲ್ಲ. ಇದರಿಂದಾಗಿ ಶಾಸಕರ ಅಭಿಪ್ರಾಯ ಸಂಗ್ರಹಿಸಬೇಕೆಂಬ ಸಿದ್ಧರಾಮಯ್ಯ ಅಭಿಪ್ರಾಯಕ್ಕೆ ಹಿನ್ನಡೆಯಾಗಿದೆ ಎನ್ನಲಾಗಿದ್ದು, ದೆಹಲಿಗೆ ಬರುವಂತೆ ಸಿದ್ಧರಾಮಯ್ಯ, ಡಿ.ಕೆ. ಶಿವಕುಮಾರ್ ಅವರಿಗೆ ಹೈಕಮಾಂಡ್ ಸೂಚನೆ ನೀಡಿದ್ದು, ದೆಹಲಿಯಲ್ಲಿ ಇಬ್ಬರೊಂದಿಗೆ ಚರ್ಚೆ ನಡೆಸಿ ಸಿಎಂ ಆಯ್ಕೆ ಮಾಡಲಾಗುವುದು. ಖರ್ಗೆಯವರು ಕೈಗೊಳ್ಳಲಿರುವ ನಿರ್ಧಾರದತ್ತ ಎಲ್ಲರ ಚಿತ್ತ ನೆಟ್ಟಿದೆ.