ಬೆಂಗಳೂರು: ನಾಳೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗುವವರ ಪಟ್ಟಿಯನ್ನು ಅಂತಿಮಗೊಳಿಸಲು ಇಂದು ಉಭಯ ನಾಯಕರು ದೆಹಲಿಗೆ ತೆರಳಿದ್ದಾರೆ. ಸಿಎಂ ಮತ್ತು ಡಿಸಿಎಂ ಜೊತೆಗೆ 28 ಮಂದಿ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇದಕ್ಕಾಗಿ ಸಂಭಾವ್ಯ ಸಚಿವರ ಪಟ್ಟಿ ಸಿದ್ಧಪಡಿಸಲಿದ್ದು, ಹಿರಿಯ ಶಾಸಕರೊಂದಿಗೆ ವಿಧಾನಪರಿಷತ್ ಸದಸ್ಯರಿಗೂ ಸಂಪುಟದಲ್ಲಿ ಅವಕಾಶ ನೀಡಲಿದ್ದು, ವರಿಷ್ಠರ ಸಮ್ಮುಖದಲ್ಲಿ ಸಮಾಲೋಚನೆ ನಡೆಸಿ ನೂತನ ಸಚಿವರ ಪಟ್ಟಿಯನ್ನು ಫೈನಲ್ ಮಾಡಲಾಗುತ್ತದೆ.
ಇಂದು ಸಂಭಾವ್ಯ ಸಚಿವರ ಪಟ್ಟಿಯೊಂದಿಗೆ ಸಿದ್ದರಾಮಯ್ಯ, ಡಿಕೆಶಿ ದೆಹಲಿಗೆ ತೆರಳಿದಿದ್ದಾರೆ. ದೆಹಲಿಯಲ್ಲಿ ಹೈಕಮಾಂಡ್ ನಾಯಕರೊಂದಿಗೆ 28 ಮಂದಿ ಸಚಿವರ ಪಟ್ಟಿ ಫೈನಲ್ ಮಾಡಲಾಗುತ್ತದೆ. ನಾಲ್ಕು ಸಚಿವ ಸ್ಥಾನಗಳನ್ನು ಉಳಿಸಿಕೊಂಡು ಎಲ್ಲಾ ಸಚಿವ ಸ್ಥಾನಗಳನ್ನು ಭರ್ತಿ ಮಾಡಲಾಗುವುದು. ಸಂಪುಟದಲ್ಲಿ ಸಾಮಾಜಿಕ ನ್ಯಾಯ ಮತ್ತು ಪ್ರಾದೇಶಿಕತೆಗೆ ಅವಕಾಶ ಸಿಗುವಂತೆ, ಎಲ್ಲಾ ಜಿಲ್ಲೆಗಳಿಗೂ ಪ್ರತಿನಿತ್ಯ ಸಿಗುವಂತೆ ನೋಡಿಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಹೈಕಮಾಂಡ್ ನೀಡಿದ ಸೂಚನೆಯಂತೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಸಂಭಾವ್ಯ ಸಚಿವರ ಪಟ್ಟಿ ಸಿದ್ದಪಡಿಸಿಕೊಂಡು ದೆಹಲಿಗೆ ತೆರಳಲಿದ್ದಾರೆ.