ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳೆರಡರಲ್ಲಿಯೂ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಲು ವ್ಯವಸ್ಥೆ ಕಲ್ಪಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ಕೋವಿಡ್ ಚಿಕಿತ್ಸೆ ಮತ್ತು ಲಸಿಕೆ, ಸೋಂಕು ನಿಯಂತ್ರಣಕ್ಕಾಗಿ ಪಿಎಂ ಕೇರ್ಸ್ ನಿಧಿಗೆ ಕೇಂದ್ರ ಸರ್ಕಾರ ಹಣ ಸಂಗ್ರಹಿಸಿದೆ. ಈ ನಿಧಿಯನ್ನು ಕೋವಿಡ್ ಲಸಿಕೆಯ ಉಚಿತ ವಿತರಣೆಗೆ ಬಳಸಬೇಕು ಎಂದು ಹೇಳಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುವ ಕೋವಿಡ್ ಲಸಿಕೆಗೆ 250 ರೂ. ಶುಲ್ಕ ನಿಗದಿಪಡಿಸಿರುವುದರಿಂದ ಶೇಕಡ 70 ರಷ್ಟು ಇರುವ ಬಡಜನ ಲಸಿಕೆ ಪಡೆಯಲು ಹಿಂಜರಿಯುವಂತಾಗಿದೆ. ಇದರಿಂದಾಗಿ ಕೋವಿಡ್ ವಿರುದ್ಧದ ಸಮರಕ್ಕೆ ಹಿನ್ನಡೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ಭಾರತ ಎರಡು ಬಗೆಯ ಕೋವಿಡ್ ಲಸಿಕೆಗಳನ್ನು ಕಂಡು ಹಿಡಿದಿದ್ದರೂ, ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ದೇಶದಲ್ಲಿ ಇದುವರೆಗೆ 0.5 ರಷ್ಟು ಜನಸಂಖ್ಯೆಗಷ್ಟೇ ಲಸಿಕೆ ನೀಡಿರುವುದು ವಿಷಾದನೀಯ. ಇತ್ತೀಚೆಗೆ ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಈ ಪರಿಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಲಕ್ಷಿಸಿದರೆ ಅನಾಹುತವಾದೀತು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.