ಮೈಸೂರು: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಆದರೆ, ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವುದೇಕೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಪರೀಕ್ಷೆ ನಡೆಸುವುದು ಬೇಡವೆಂದು ಶಿಕ್ಷಣ ಸಚಿವರಿಗೆ ತಿಳಿಸಿದ್ದೆ. ಮಂತ್ರಿಮಂಡಲದಲ್ಲಿ ಸಮನ್ವಯತೆ ಇದೆ. ಸಚಿವರಾದ ಸುರೇಶ್ ಕುಮಾರ್ ಮತ್ತು ಸುಧಾಕರ್ ನಡುವೆ ಸಮನ್ವಯತೆ ಇಲ್ಲವಾಗಿದೆ ಎಂದು ಅವರು ದೂರಿದ್ದಾರೆ.
ಕೊರೋನಾ ಲಸಿಕೆ ಬಗ್ಗೆಯೂ ಸುಳ್ಳು ಹೇಳುತ್ತಿದ್ದಾರೆ. ಲಸಿಕೆ ಇದ್ದಿದ್ದರೆ ಜನರು ಏಕೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದರು? ಚಾಮರಾಜನಗರ ಆಕ್ಸಿಜನ್ ದುರಂತದಲ್ಲೂ ಸುಳ್ಳು ಹೇಳಿದರು. ಮೂವರು ಮೃತಪಟ್ಟಿರುವುದಾಗಿ ಸಚಿವ ಡಾ.ಕೆ. ಸುಧಾಕರ್ ಸುಳ್ಳು ಹೇಳಿದ್ದರು. ಕೊರೋನಾ ಎರಡನೆ ಅಲೆಯ ನಿರ್ವಹಣೆಗೆ ಸಿದ್ಧತೆ ಮಾಡಿಕೊಂಡಿರಲಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತಪ್ಪಿದೆ ಎಂದು ಟೀಕಿಸಿದ್ದಾರೆ.
ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಸ್ಥಾನದ ಆಸೆ ಇನ್ನೂ ಹೋಗಿಲ್ಲ. ಚಾಮರಾಜನಗರಕ್ಕೆ ಹೋದರೆ ಮುಖ್ಯಮಂತ್ರಿ ಸ್ಥಾನ ಹೋಗುತ್ತದೆ ಎನ್ನುವ ಆತಂಕ ಇರುವುದರಿಂದ ಅವರು ಚಾಮರಾಜನಗರಕ್ಕೆ ಹೋಗಿಲ್ಲ ಎಂದು ವ್ಯಂಗ್ಯವಾಡಿದ್ದು, ಚಾಮರಾಜನಗರ ಆಕ್ಸಿಜನ್ ದುರಂತದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಮುಖ್ಯಮಂತ್ರಿ ಸ್ಥಾನದ ಬಗ್ಗೆ ಚರ್ಚಿಸಲು ಇನ್ನೂ ಸಮಯವಿದೆ. ಚುನಾವಣೆ ನಡೆಯಬೇಕು, ಬಹುಮತ ಬರಬೇಕು. ನಂತರ ಸಿಎಂ ಸ್ಥಾನದ ಬಗ್ಗೆ ಚರ್ಚಿಸಬೇಕು. ಈಗ ಏಕೆ ಸಿಎಂ ಸ್ಥಾನದ ಬಗ್ಗೆ ಚರ್ಚೆ ಎಂದು ಅವರು ಹೇಳಿದ್ದಾರೆ.