
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯಿಂದಾಗಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಇದರಿಂದಾಗಿ ದೇವಾಲಯಗಳಿಗೆ ಭೇಟಿ ನೀಡಿವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.
ಶಕ್ತಿ ಯೋಜನೆಯ ಎಫೆಕ್ಟ್ ನಿಂದಾಗಿ ರಾಜ್ಯದ ದೇವಾಲಯಗಳ ಹುಂಡಿಗಳಿಗೂ ಭರ್ಜರಿ ಶಕ್ತಿ ತುಂಬಿದಂತಾಗಿದೆ. ಉಚಿತ ಬಸ್ ಪ್ರಯಾಣದಿಂದಾಗಿ ದೇವಾಲಯಗಳಿಗೆ ಹರಿದು ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಿದ್ದರಿಂದ ರಾಜ್ಯದ ಮುಜರಾಯಿ ಇಲಾಖೆಯಡಿಯಲ್ಲಿನ ಪ್ರಮುಖ ದೇವಾಲಯಗಳ ಹುಂಡಿಯಲ್ಲಿಯೂ ಕಾಣಿಕೆ ರೂಪದಲ್ಲಿ ಹಣ ಸಂಗ್ರಹ ಹೆಚ್ಚಾಗಿದೆ.
ರಾಜ್ಯದ ಪ್ರಮುಖ ದೇವಾಲಯಗಳಾದ ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕೆ, ನಂಜನಗೂಡು ಶ್ರೀಕಂಠೇಶ್ವರ, ಸವದತ್ತಿ ರೇಣೂಕಾ ಯಲ್ಲಮ್ಮ, ಮಂದಾರ್ತಿ ಶ್ರೀ ದುರ್ಗಾ ಪರಮೇಶ್ವರಿ, ಕೊಪ್ಪಳದ ಹುಲಿಗೆಮ್ಮದೇವಿ, ಘಾಟಿ ಸುಬ್ರಹ್ಮಣ್ಯ, ಬೆಂಗಳೂರಿನ ಬನಶಂಕರಿ ದೇವಾಲಯ ಸೇರಿದಂತೆ ರಾಜ್ಯದ ವಿವಿಧ ದೇವಾಲಯಗಳ ಹುಂಡಿ ಏಣಿಕೆ ಕಾರ್ಯದ ವೇಳೆ ದೇವಾಲಯದ ಆದಾಯದಲ್ಲಿ ಏರಿಕೆಯಾಗಿರುವುದು ಕಂಡುಬಂದಿದೆ.
ರಾಜ್ಯದಲ್ಲಿ ಒಟ್ಟು 34,563 ಮುಜರಾಯಿ ದೇವಾಲಯಗಳಿದ್ದು, 2022-23ರ ಸಾಲಿನಲ್ಲಿ 709 ಕೋಟಿ ರೂ ಆದಾಯ ಗಳಿಸಿದ್ದವು. ಪ್ರಾಥಮಿಕ ಅಂದಾಜಿನ ಪ್ರಕಾರ 2023-24ರಲ್ಲಿ ಇವುಗಳ ಆದಾಯ 1,000 ಕೋಟಿ ರೂಪಾಯಿ ದಾಟಿದೆ.
ಈ ನಿಟ್ಟಿನಲ್ಲಿ ದೇವಾಲಯಗಳ ಹುಂಡಿಗಳಲ್ಲಿ ಸಂಗ್ರಹವಾದ ಹಣವನ್ನು ದೇವಸ್ಥಾಗಳ ಅಭಿವೃದ್ಧಿಗೆ ಮಾತ್ರ ಬಳಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿರುವ ಸಿಎಂ ಸಿದ್ದರಾಮಯ್ಯ, ಶಕ್ತಿ ಯೋಜನೆಯ ಮೂಲಕ ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ದೊರಕಿದ ನಂತರದಿಂದ ರಾಜ್ಯದ ದೇವಾಲಯಗಳಿಗೆ ಬರುವ ಭಕ್ತರ ಸಂಖ್ಯೆ ಏರಿಕೆಯಾಗಿ, ಅವುಗಳ ಆದಾಯವೂ ಹೆಚ್ಚಾಗಿದೆ.
ಭಕ್ತರಿಂದ ಕಾಣಿಕೆ, ದೇಣಿಗೆ ರೂಪದಲ್ಲಿ ಸಂಗ್ರಹವಾಗುವ ಆದಾಯವನ್ನು ಅದೇ ದೇವಾಲಯದ ಅಭಿವೃದ್ಧಿಗೆ ಕಡ್ಡಾಯವಾಗಿ ಬಳಕೆ ಮಾಡಲಾಗುತ್ತಿದ್ದು, ಶಕ್ತಿಯು ಹಿಂದೂ ಧಾರ್ಮಿಕ ಕೇಂದ್ರಗಳಿಗೆ ಶಕ್ತಿ ತುಂಬಿದೆ ಎಂದು ಸ್ಪಷ್ಟಪಡಿಸಿದ್ದಾರೆ.