ಕಲಬುರ್ಗಿ: ಕೇಂದ್ರ ಸರ್ಕಾರ ಕೊನೆಗೂ ರಾಜ್ಯಕ್ಕೆ ಬರ ಪರಿಹಾರ ಘೋಷಣೆ ಮಾಡಿದೆ. ರಾಜ್ಯ ಕೇಳಿದ್ದ 18,174 ಕೋಟಿ ರೂ. ಪೈಕಿ 3,454 ಕೋಟಿ ರೂ ಪರಿಹಾರ ಘೋಷಣೆ ಮಾಡಿದೆ.
ಕೇಂದ್ರ ಸರ್ಕಾರದ ಬರ ಪರಿಹಾರದ ಬಗ್ಗೆ ಕಲಬುರ್ಗಿಯಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ನಮಗೆ ಬಹಳ ಕಡಿಮೆ ಬರ ಪರಿಹಾರ ನೀಡಿದೆ. ಸೆಪ್ಟೆಂಬರ್ ನಲ್ಲಿಯೇ ನಾವು 18,174 ಕೋಟಿ ರೂ. ಬರ ಪರುಹಾರ ನೀಡಲು ಮನವಿ ಮಡಿದ್ದೆವು. ಆಗ ಅಮಿತ್ ಶಾ ಚುನಾವಣಾ ನೀತಿ ಸಂಹಿತೆ ಇದೆ ಎಂದರು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಾವು ಬರ ಪರಿಹಾರ ಕೇಳಿಲ್ಲ, ಗ್ಯಾರಂಟಿಗೆ ಹಣ ಕೇಳಿದ್ದಾರೆ ಎಂದರು. ನಾವು ಗ್ಯಾರಂಟಿ ಯೋಜನೆಗೆ ಕೇಂದ್ರದ ಬಳಿ ಹಣ ಕೇಳಿಲ್ಲ ಎಂದು ತಿಳಿಸಿದರು.
ಬಳಿಕ ಡಿಸೆಂಬರ್ 20ರಂದು ನಾನು, ಸಚಿವ ಕೃಷ್ಣಬೈರೇಗೌಡ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾದೆವು. ಆಗ ಸಭೆ ನಡೆಸುವುದಾಗಿ ಹೇಳಿದರು. ಯಾವುದೇ ಸಭೆಯನ್ನೂ ನಡೆಸಿಲ್ಲ. ಬರ ಪರಿಹಾರ ನೀಡಲು ವಿಳಂಬ ಮಾಡಿದ್ದಕ್ಕೆ ನಾವು ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಾಯ್ತು. ಈಗ ಪ್ರಧಾನಿ ನರೇಂದ್ರ ಮೋದಿ ನಾಳೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಹಾಗಾಗಿ ಬರ ಪರಿಹಾರ ಘೋಷಣೆ ಮಾಡಿದ್ದಾರೆ. ಆದರೆ ಇದು ತುಂಬಾ ಕಡಿಮೆ ಪ್ರಮಾನದ ಪರಿಹಾರವಾಗಿದೆ ಎಂದರು.