ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಕೋಮುವಾದಿಗಳ ಜೊತೆ ಹೋಗುವುದಿಲ್ಲ ಎಂದಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಈಗ ಅವರ ಜೊತೆಯೇ ಕೈಜೋಡಿಸಿದ್ದಾರೆ ಕುಟುಂಬ ರಾಜಕಾರಣದ ಉಳಿವಿಗೆ ಏನುಬೇಕಾದ್ರೂ ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಸೂಲಿಕೆರೆ ಮೈದಾನದಲ್ಲಿ ಶಿಕ್ಷಕರ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯನ್ನು ಯಾರು ಅಧಿಕಾರದಿಂದ ಕೆಳಗಿಳಿಸಿದರೋ ಅವರೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಬಿಜೆಪಿ ಜೊತೆ ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ನಾವು ಏನೇ ತೀರ್ಮಾನ ಮಾಡಿದರೂ ಜನ ಕಣ್ಮುಚ್ಚಿ ಬೆಂಬಲಿಸುತ್ತಾರೆ ಅಂದುಕೊಂಡಿದ್ದಾರೆ ಎಂದರು.
ದೇವೇಗೌಡರು ಮಾಜಿ ಪ್ರಧಾನಿ ಆಗಿದ್ದವರು. ಅವರಿಗೆ ಅದೇನ್ ಆಗಿದೆಯೋ ಗೊತ್ತಿಲ್ಲ. ಈ ಹಿಂದೆ ಮೋದಿ ಗೆದ್ದರೆ ವಿದೇಶಕ್ಕೆ ಹೋಗುತ್ತೇನೆ ಎಂದಿದ್ದರು. ಈಗ ಬಿಜೆಪಿ ಜೊತೆಯೇ ಕೈಜೊಡಿಸಿದ್ದಾರೆ. ಮೋದಿಯನ್ನೇ ಹೊಗಳುತ್ತಿದ್ದಾರೆ. ಮಾಜಿ ಪ್ರಧಾನಿಯಾದವರಿಂದ ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಟೀಕಿಸಿದ್ದಾರೆ.