ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ಮಾಡುವ ಬಗ್ಗೆ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿಕೆ ನೀಡಿರುವ ಕುರಿತಂತೆ ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಸಿದ್ದರಾಮಯ್ಯ ಪದೇ ಪದೇ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ನನಗೆ ದೆಹಲಿಯಿಂದ ಸಿಎಂ ಬದಲಾವಣೆ ಮಾಹಿತಿ ಇದೆ ಎಂದು ಅವರು ಹೇಳುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯನವರಿಗೆ ನಾನು ಹೇಳಲು ಇಚ್ಚಿಸುತ್ತೇನೆ. ಆರ್.ಆರ್. ನಗರ ಮತ್ತು ಶಿರಾ ಉಪಚುನಾವಣೆಯಲ್ಲಿ ನೀವು ಸೋಲುತ್ತೀರಿ. ಹಾಗಾಗಿ ವಿರೋಧ ಪಕ್ಷದ ನಾಯಕರ ಬದಲಾವಣೆ ಬಗ್ಗೆ ಯೋಚನೆ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಸಿಎಂ ಸ್ಥಾನದಿಂದ ಯಡಿಯೂರಪ್ಪ ಅವರ ಬದಲಾವಣೆ ಬಗ್ಗೆ ಯೋಚಿಸುತ್ತಿಲ್ಲ. ವಿಪಕ್ಷ ನಾಯಕರ ಬದಲಾವಣೆ ಬಗ್ಗೆ ಯೋಚನೆ ನಡೆದಿದೆ. ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯೆ ನೀಡಬಾರದೆಂದು ಸುಮ್ಮನಿದ್ದೆ. ಆದರೆ, ದಿನೇ ದಿನೇ ಜಾಸ್ತಿಯಾಗುತ್ತಿರುವುದರಿಂದ ಪ್ರತಿಕ್ರಿಯೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಫಲಿತಾಂಶದ ನಂತರ ಯಾರ ಬಂಡವಾಳ ಏನೆಂದು ಇಡೀ ದೇಶಕ್ಕೆ ಗೊತ್ತಾಗುತ್ತದೆ. ನವೆಂಬರ್ 10 ರವರೆಗೆ ಕಾಯಿರಿ ಎಂದು ಸಿದ್ದರಾಮಯ್ಯನವರಿಗೆ ಹೇಳುತ್ತೇನೆ ಎಂದು ಸಿಎಂ ತಿಳಿಸಿದ್ದಾರೆ.
ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ದೆಹಲಿ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿಎಂ, ನವದೆಹಲಿಗೆ ಹೋಗುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರ ಜೊತೆಗೆ ಮಾತನಾಡುತ್ತೇನೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಕರೆ ಮಾಡಿದ್ದರು. ಅವರ ಜೊತೆ ಮಾತನಾಡುವ ಅಗತ್ಯವಿದ್ದರೆ ದೆಹಲಿಗೆ ತೆರಳುತ್ತೇನೆ ಎಂದು ಹೇಳಿದ್ದಾರೆ.