ಬೆಂಗಳೂರು: ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗಿದ್ದು, ಜನವರಿ 22ರಂದು ರಾಮ ಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾನೆ ಕಾರ್ಯಕ್ರಮ ನಡೆಯಲಿದೆ. ಇದೇ ದಿನದಂದು ಸಿಎಂ ಸಿದ್ದರಾಮಯ್ಯ ಕೂಡ ಬೆಂಗಳೂರಿನಲ್ಲಿ ರಾಮ ಮಂದಿರ ಉದ್ಘಟಿಸಲಿದ್ದಾರೆ ಎಂಬುದು ವಿಶೇಷ.
ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿಯಲ್ಲಿ ಶ್ರೀರಾಮ ಟ್ರಸ್ಟ್ ನಿರ್ಮಿಸಿರುವ ಸೀತಾ-ರಾಮ, ಲಕ್ಷ್ಮಣ, ಆಂಜನೇಯ ದೇವಾಲಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಜನವರಿ 22ರಂದು ಉದ್ಘಾಟಿಸಲಿದ್ದಾರೆ.
ಸೀತಾ-ರಾಮ ಲಕ್ಷ್ಮಣ ಹಾಗೂ 33 ಅಡಿ ಎತ್ತರದ ಏಕಶಿಲಾ ಆಂಜನೇಯ ಸ್ವಾಮಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ.
ಅಯೋಧ್ಯೆ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಿಂದ ಕಾಂಗ್ರೆಸ್ ದೂರ ಉಳಿದಿದ್ದು, ಕಾಂಗ್ರೆಸ್ ನಾಯಕರು ರಾಮನ ವಿರೋಧಿಗಳು ಎಂಬ ರೀತಿಯಲ್ಲಿ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ನಾಯಕರು ರಾಜ್ಯದ ವಿವಿಧೆಡೆ ರಾಮ ಮಂದಿರಗಳಿಗೆ ಭೇಟಿ ನೀಡುತ್ತಿರುವ, ರಾಮನಾಮ ಜಪಿಸುತ್ತಿರುವ ಹಾಗೂ ಸ್ವತ: ಸಿದ್ದರಾಮಯ್ಯ ಅವರ ತವರೂರಿನಲ್ಲಿಯೇ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಅಲ್ಲದೇ ಸ್ವತ: ಸಿದ್ದರಾಮಯ್ಯ ಈಗ ಜ.22ರಂದು ಬಿದರಹಳ್ಳಿಯಲ್ಲಿ ರಾಮ ಮಂದಿರ ಉದ್ಘಾಟನೆ ಮಾಡುವ ಮೂಲಕ ಬಿಜೆಪಿ ನಾಯಕರಿಗೆ ಪ್ರತ್ಯುತ್ತರ ನೀಡಲಿದ್ದಾರೆ.