ತನ್ನ 11 ವರ್ಷದ ಸಹೋದರಿಯೊಂದಿಗೆ 10 ವರ್ಷದ ಬಾಲಕನೊಬ್ಬ ಬರೋಬ್ಬರಿ 200 ಮೈಲಿ ದೂರ ಕಾರು ಚಾಲನೆ ಮಾಡಿಕೊಂಡು ಹೋಗಿರುವ ಅಚ್ಚರಿಯ ಘಟನೆ ಅಮೆರಿಕಾದಲ್ಲಿ ನಡೆದಿದೆ. ಅಷ್ಟಕ್ಕೂ ಈತ ಈ ಕೆಲಸ ಮಾಡಿದ್ದೇಕೆ ಅಂತ ತಿಳಿದರೆ ನೀವು ಅಚ್ಚರಿಪಡುತ್ತೀರಿ.
ಅಮೆರಿಕಾದಲ್ಲಿ ಈ ಘಟನೆ ನಡೆದಿದ್ದು, ಫ್ಲೋರಿಡಾದ ಬಾಲಕ ಹಾಗೂ ಆತನ ಸಹೋದರಿ ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಸದಾ ಕಾಲ ಬಳಸುತ್ತಿದ್ದ ಕಾರಣಕ್ಕೆ ಅವರ ತಾಯಿ ಬೈದಿದ್ದರೂ ಎನ್ನಲಾಗಿದೆ.
ಅಷ್ಟಕ್ಕೆ ಸಿಟ್ಟು ಮಾಡಿಕೊಂಡ ಈ ಬಾಲಕ ತನ್ನ ಸಹೋದರಿಯೊಂದಿಗೆ ಕ್ಯಾಲಿಫೋರ್ನಿಯಾಗೆ ಹೋಗಲು ಮುಂದಾಗಿದ್ದಾನೆ. ಇದಕ್ಕಾಗಿ ತನ್ನ ತಾಯಿಯ ಕಾರು ಚಾಲನೆ ಮಾಡಿಕೊಂಡು ಹೋಗಿದ್ದು, ಹೈವೇಯಲ್ಲಿ ಪೊಲೀಸರು ಇವರ ಕಾರನ್ನು ತಡೆದಿದ್ದಾರೆ.
ಇದಕ್ಕೂ ಮುನ್ನ ಇವರ ತಾಯಿ ತನ್ನ ಮಕ್ಕಳು ನಾಪತ್ತೆಯಾಗಿರುವುದು ಹಾಗೂ ಕಾರು ಕಳುವಾಗಿರುವುದರ ಕುರಿತು ದೂರು ದಾಖಲಿಸಿದ್ದರು ಎನ್ನಲಾಗಿದೆ. ಇದರ ಮಾಹಿತಿ ಇದ್ದ ಹೈವೇ ಪೊಲೀಸರು ಕಾರು ನಿಲ್ಲಿಸಲು ಸಿಗ್ನಲ್ ಮಾಡಿ ಒಳಗಡೆ ಕಳ್ಳರಿರಬಹುದು ಎಂದು ಭಾವಿಸಿ ಗನ್ ಹಿಡಿದು ಸುತ್ತುವರೆದಿದ್ದಾರೆ.
ಆದರೆ ಚಾಲಕನ ಸೀಟಿನಿಂದ 10 ವರ್ಷದ ಬಾಲಕ ತನ್ನ ಕೈ ಮೇಲೆ ಎತ್ತಿ ಕೆಳಗಿಳಿದ ವೇಳೆ ಪೊಲೀಸರು ಅಚ್ಚರಿಗೊಂಡಿದ್ದಾರೆ. ಈತನ ಜೊತೆಯಲ್ಲಿ 11 ವರ್ಷದ ಸಹೋದರಿಯೂ ಇರುವ ಸಂಗತಿ ಗೊತ್ತಾಗಿದೆ. ಇದೀಗ ತಾಯಿ ತನ್ನ ದೂರನ್ನು ಹಿಂಪಡೆದ ಕಾರಣ ಮಕ್ಕಳನ್ನು ಅವರ ವಶಕ್ಕೆ ನೀಡಲಾಗಿದೆ. ತಾಯಿ ಹಾಗೂ ಮಕ್ಕಳ ಹೆಸರನ್ನು ಪೊಲೀಸರು ಗೌಪ್ಯವಾಗಿ ಇಟ್ಟಿದ್ದಾರೆ.