ಚಿಕ್ಕಮಗಳೂರು: ಕರಾವಳಿ, ಮಲೆನಾಡು ಭಾಗದಲ್ಲಿ ಭಾರಿ ಮಳೆ ಮುಂದುವರೆದಿದ್ದು, ಹಲವೆಡೆ ಗುಡ್ಡ ಕುಸಿತ, ಭೂಕುಸಿತ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದಾಗಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಜನರು ಪರದಾಡುವ ಸ್ಥಿತಿ ನಿರ್ಮಣವಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಪ್ರಸಿದ್ಧ ಯಾತ್ರಾ ಸ್ಥಳ ಶೃಂಗೇರಿ-ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ.
ಇಲ್ಲಿನ ನೆಮ್ಮಾರು ಪ್ರದೇಶದಲ್ಲಿ ಹೆದ್ದಾರಿಯಲ್ಲಿ ಭೂ ಕುಸಿತ ಸಂಭವಿಸಿದ್ದು, ವಾಹನ ಸವಾರರು ಆತಂಕದಲ್ಲಿಯೇ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದಾರೆ. ರಸ್ತೆಯ ಅಂಚಿನಲ್ಲಿ ಭೂ ಕುಸಿತ ಸಂಭವಿಸಿದೆ. ರಸ್ತೆಯಲ್ಲಿ ಬಿರುಕು ಉಂಟಾಗಿದೆ. ಇಂತಹ ಅಪಾಯದ ನಡುವೆಯೂ ವಾಹನ ಸವಾರರು ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ.
ಇದೇ ರೀತಿ ಮಳೆ ಮುಂದುವರಿದರೆ ಇನ್ನಷ್ಟು ಭೂಕುಸಿತ, ಗುಡ್ಡ ಕುಸಿತ ಸಂಭವಿಸುವ ಆತಂಕ ಎದುರಾಗಿದೆ. ಇನ್ನು ಮಳೆ ಅಬ್ಬರಕ್ಕೆ ಭದ್ರಾ ನದಿ ಉಕ್ಕಿ ಹರಿಯುತ್ತಿದ್ದು, ಹೆಬ್ಬಾಳೆ ಸೇತುವೆ ಕೆಲ ದಿನಗಳಿಂದ ಜಲಾವೃತಗೊಂಡಿತ್ತು. ಇದೀಗ ಕೊಂಚ ಸೇತುವೆ ಮೇಲಿನ ನೀರು ತಗ್ಗಿದ್ದು, ಸೇತುವೆ ಮುಳುಗಡೆಯಾಗಿದ್ದರಿಂದ ಶಿಥಿಲಗೊಂಡಿದೆ. ಭದ್ರಾ ನದಿಯ ಅಬ್ಬರದಿಂದಾಗಿ ಡಾಂಬರು ಕಿತ್ತು ಹೋಗಿದ್ದು, ತಡೆಗೋಡೆ ಮುರಿದು ಹೋಗಿದೆ.